Advertisement

Mood Of the Nation Survey: ನರೇಂದ್ರ ಮೋದಿ ನಂತರ ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಆಯ್ಕೆ?

12:39 PM Aug 23, 2024 | ನಾಗೇಂದ್ರ ತ್ರಾಸಿ |

ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಹತ್ತು ವರ್ಷಕ್ಕೂ ಅಧಿಕ ಕಾಲ ದೇಶವನ್ನು ಮುನ್ನಡೆಸುತ್ತಿರುವ ಅವರು 3ನೇ ಬಾರಿಯ ಪ್ರಧಾನಿ ಹುದ್ದೆಯ ಅವಧಿ ಮುಕ್ತಾಯಗೊಳ್ಳುವ ಮೊದಲೇ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಸುಬ್ರಮಣಿಯನ್‌ ಸ್ವಾಮಿ ಆರ್‌ ಎಸ್‌ ಎಸ್‌ ಪ್ರಚಾರಕರ ಸಂಸ್ಕಾರಕ್ಕೆ ಬದ್ಧರಾಗಿ ಮೋದಿ ತಮ್ಮ 75ನೇ ಹುಟ್ಟು ಹಬ್ಬದ ಅನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಬೇರೆಯದ್ದೇ ಮಾರ್ಗದಲ್ಲಿ ಅವರು ಪ್ರಧಾನಿ ಹುದ್ದೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಟ್ವೀಟ್‌ ಮಾಡಿದ್ದರು. ಅಷ್ಟೇ ಅಲ್ಲದೇ ಈಗಾಗಲೇ ಬಿಜೆಪಿಯಲ್ಲಿ 75 ವರ್ಷದ ನಂತರ ಅಧಿಕಾರದಲ್ಲಿ ಮುಂದುವರಿಯಬಾರದು ಎಂಬ ನಿಟ್ಟಿನಲ್ಲಿ ಅಧಿಕಾರದಿಂದ ಕೆಳಗಿಳಿಸಿದ ಉದಾಹರಣೆಯೂ ಕಣ್ಮುಂದಿದೆ. ಇವೆಲ್ಲದರ ನಡುವೆ ಜನಸಾಮಾನ್ಯರು ಕೂಡ 75 ವರ್ಷದ ಬಳಿಕ ಪ್ರಧಾನಿ ಮೋದಿ ಅಧಿಕಾರದಲ್ಲಿ ಮುಂದುವರಿಯುತ್ತಾರಾ ಅಥವಾ ಹುದ್ದೆಯಿಂದ ನಿರ್ಗಮಿಸುತ್ತಾರಾ ಎಂಬ ಕುತೂಹಲ ಮೂಡಿಸಿದೆ.

Advertisement

ಈ ಎಲ್ಲಾ ಅಂಶಗಳ ಜತೆ ಇಂಡಿಯಾ ಟುಡೇಯ Mood Of the Nation ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಯಾರು ಪ್ರಧಾನಿಯಾದರೆ ಉತ್ತಮ ಎಂಬುದನ್ನು ಬಹಿರಂಗಪಡಿಸಿದೆ.

ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಗಳಲ್ಲಿ ನರೇಂದ್ರ ಮೋದಿ ಅವರ ನಂತರ ಅಮಿತ್‌ ಶಾ ಅವರ ಹೆಸರು ಪ್ರಥಮ ಆಯ್ಕೆಯಲ್ಲಿದ್ದು, ಶೇ.25ರಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಯೋಗಿ ಆದಿತ್ಯನಾಥ್‌ ಹಾಗೂ ನಿತೀನ್‌ ಗಡ್ಕರಿ ಸ್ಥಾನ ಪಡೆದಿರುವುದು ಸಮೀಕ್ಷೆ ತಿಳಿಸಿದೆ.

ನರೇಂದ್ರ ಮೋದಿ ಅವರ ನಂತರ ಯಾರು ಪ್ರಧಾನಿಯಾದರೆ ಉತ್ತಮ ಎಂಬ ಪ್ರಶ್ನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶೇ.19ರಷ್ಟು ಸಹಮತದೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಅದೇ ರೀತಿ ರಸ್ತೆ ಸಾರಿಗೆ ಸಚಿವ ನಿತೀನ್‌ ಗಡ್ಕರಿ ಅವರು ಶೇ.13ರಷ್ಟು ಸಹಮತದೊಂದಿಗೆ 3ನೇ ಸ್ಥಾನ ಪಡೆದಿರುವುದಾಗಿ ಇಂಡಿಯಾ ಟುಡೇ Mood Of the Nation  ಸಮೀಕ್ಷೆ ವಿವರಿಸಿದೆ.

Advertisement

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅಂದಾಜು ಶೇ.5ರಷ್ಟು ಮತ ಪಡೆದಿದ್ದಾರೆ. ಮತ್ತೊಂದೆಡೆ ನರೇಂದ್ರ ಮೋದಿ ನಂತರ ಅವರ ಉತ್ತರಾಧಿಕಾರಿಯಾಗಲು ಅಮಿತ್‌ ಶಾ ಸೂಕ್ತ ಎಂಬ ಶೇ.25ರಷ್ಟು ಮತ ಪಡೆದಿದ್ದರು ಕೂಡಾ ಇದು ಕಳೆದ ವರ್ಷಕ್ಕಿಂತ ಕಡಿಮೆ ಮತಪಡೆಯುವ ಮೂಲಕ ಜನಪ್ರಿಯತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿರುವುದಾಗಿ ಸಮೀಕ್ಷೆ ಹೇಳಿದೆ.

2023ರ ಆಗಸ್ಟ್‌ ನಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ  ನರೇಂದ್ರ ಮೋದಿ ನಂತರ ಪ್ರಧಾನಿ ಸ್ಥಾನಕ್ಕೆ ಅಮಿತ್‌ ಶಾ ಅತ್ಯುತ್ತಮ ಆಯ್ಕೆ ಎಂದು ದಕ್ಷಿಣ ಭಾರತದ ಶೇ.31ರಷ್ಟು ಜನರು ಆಶಯ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಶಾ ಶೇ.25ರಷ್ಟು ಮತ ಪಡೆದಿದ್ದಾರೆ.

ಅಮಿತ್‌ ಶಾ ರೀತಿ ಯೋಗಿ ಆದಿತ್ಯನಾಥ್‌ ಅವರ ಜನಪ್ರಿಯತೆ ಕೂಡಾ ಕುಸಿದಿದೆ. 2023ರ ಆಗಸ್ಟ್‌ ನಲ್ಲಿ ಯೋಗಿ ಶೇ.25ರಷ್ಟು ಮತ ಪಡೆದಿದ್ದರೆ, 2024ರ ಆಗಸ್ಟ್‌ ನಲ್ಲಿ ಶೇ.23 ಪಡೆದಿದ್ದು, ಈಗ ಶೇ.19ರಷ್ಟು ಮತ ಪಡೆದಿರುವುದಾಗಿ ಸಮೀಕ್ಷೆ ತಿಳಿಸಿದೆ.

ಶೇ.13ರಷ್ಟು ಮತ ಪಡೆದಿರುವ ನಿತೀನ್‌ ಗಡ್ಕರಿ 3ನೇ ಸ್ಥಾನ ಪಡೆದಿದ್ದಾರೆ. ಆದರೆ ಅಮಿತ್‌ ಶಾ ಮತ್ತು ಯೋಗಿ ಆದಿತ್ಯನಾಥ್‌ ಅವರ ಸ್ಥಾನದ ಜನಪ್ರಿಯತೆ ಕುಸಿದಿದೆ. ಹಾಗಾದರೆ ಶೇಕಡವಾರು ಲೆಕ್ಕಚಾರದಲ್ಲಿ ಯಾರು ಹೆಚ್ಚು ಮತ ಗಳಿಸಿದ್ದಾರೆ ಎಂಬುದು ಪ್ರಶ್ನೆ ಸಹಜ. ಇಂಡಿಯಾ ಟುಡೇ Mood of the nation ಸಮೀಕ್ಷೆಯ ಪ್ರಕಾರ, ರಾಜನಾಥ್‌ ಸಿಂಗ್‌ ಮತ್ತು ಶಿವರಾಜ್‌ ಸಿಂಗ್‌ ಚೌಹಾಣ್‌ ಜನಪ್ರಿಯತೆಯಲ್ಲಿ ಶೇಕಡವಾರು ಹೆಚ್ಚಳವಾಗಿದೆ. ರಾಜನಾಥ್‌ ಸಿಂಗ್‌ ಅವರು ಶೇ.1.2ರಷ್ಟು ಹಾಗೂ ಶಿವರಾಜ್‌ ಸಿಂಗ್‌ ಅವರು ಶೇ.2.9ರಷ್ಟು ಹೆಚ್ಚು ಮತ ಪಡೆದಿರುವುದಾಗಿ ಸಮೀಕ್ಷೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next