Advertisement

ಪರಿಷತ್‌ ಚುನಾವಣೆ; ಸಿಗ್ತಿಲ್ಲ ಗೆಲುವಿನ ಪಕ್ಕಾಲೆಕ್ಕ!

01:12 PM Dec 12, 2021 | Team Udayavani |

ಬಾಗಲಕೋಟೆ: ಪ್ರತಿಷ್ಠೆಯಿಂದ ನಡೆದ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ದ್ವಿ ಸದಸ್ಯ ಸ್ಥಾನದ ಚುನಾವಣೆಯ ಮತದಾನ ಮುಗಿದಿದ್ದು, ಇದೀಗ ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.

Advertisement

ಹೌದು, ದ್ವಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು ಏಳು ಜನ ಅಭ್ಯರ್ಥಿಗಳು ಕಣದಲ್ಲಿದ್ದರಾದರೂ ಪರಸ್ಪರ ಅತ್ಯಂತ ಪ್ರತಿಷ್ಠೆಯಿಂದ ಕಣದಲ್ಲಿದ್ದವರು ಮೂವರು ಮಾತ್ರ. ಇನ್ನೂ ಕೆಲ ಪಕ್ಷೇತರರು, ಪ್ರತಿಷ್ಠಿತ ಅಭ್ಯರ್ಥಿಗಳಿಗೆ ನೆರವಾಗಲು ಕಣದಲ್ಲಿದ್ದರೆ ಹೊರತು, ಗೆಲುವಿನ ಉಮೇದಿಯಿಂದಲ್ಲ ಎಂಬುದು ಕೆಲವರ ಅಭಿಪ್ರಾಯ.

ತ್ರಿಕೋನ ಸ್ಪರ್ಧೆಯಲ್ಲಿ ಗೆಲ್ಲೋದ್ಯಾರು?: ವಿಧಾನ ಪರಿಷತ್‌ ದ್ವಿ ಸದಸ್ಯ ಸ್ಥಾನದ ಚುನಾವಣೆ ತ್ರಿಕೋನ ಸ್ಪರ್ಧೆಯಾಗಿ ಏರ್ಪಟ್ಟಿತ್ತು. ರಾಜಕೀಯ ಅಂದಾಕ್ಷಣ ಹಣಬಲ, ರಾಜಕೀಯ ಬಲ, ಜಾತಿ ಬಲ ಇದೆಲ್ಲವೂ ಇರುವುದು ಸಹಜ. ಆದರೆ, ಕಳೆದ 2015ರ ಬಳಿಕ ರಾಜಕೀಯ ತಂತ್ರಗಾರಿಕೆಯ ವರಸೆಗಳೂ ಬದಲಾಗಿವೆ. ವೈಯಕ್ತಿಕ ಟೀಕೆಗಳು ಇದೀಗ ಬೆಡ್‌ ರೂಂ ಬಾಗಿಲೂ ತಟ್ಟುತ್ತಿವೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಗುಣವಂತರೆಲ್ಲ, ಈಗಿನ ರಾಜಕೀಯ ಮತ್ತು ತಂತ್ರಗಾರಿಕೆ ಕುರಿತು ಕೊಂಚ ಬೇಸರಗೊಂಡಿದ್ದಾರೆ. ಚುನಾವಣೆ ಅಂದಾಕ್ಷಣ ಗೆಲುವಿಗಾಗಿ ಯಾವ ಹಂತದ ತಂತ್ರಗಾರಿಕೆ ಕೂಡ ನಡೆಯುತ್ತವೆ ಎಂಬುದು ಕಳೆದ 2018ರ ಚುನಾವಣೆಯಿಂದ ಸ್ಪಷ್ಟವಾಗಿ ಗೋಚರಿಸುತ್ತಲೇ ಇದೆ. ಅದೆಲ್ಲ ಒಂದೆಡೆ ಇರಲಿ. ಈ ಬಾರಿಯ ಪರಿಷತ್‌ ಚುನಾವಣೆಯೂ ಕಳೆದ ಬಾರಿಯಂತೆ ತ್ರಿಕೋನ ಸ್ಪರ್ಧೆಯಾಗಿತ್ತು.

ಬಿಜೆಪಿಯಿಂದ ಮಾಜಿ ಶಾಸಕ ಪಿ.ಎಚ್‌. ಪೂಜಾರ, ಕಾಂಗ್ರೆಸ್‌ನಿಂದ ಸುನೀಲಗೌಡ ಪಾಟೀಲ ಹಾಗೂ ಕಾಂಗ್ರೆಸ್‌ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ, ಚುನಾವಣೆ ಕಣದಲ್ಲಿ ಮುಂಚೂಣಿಯಲ್ಲಿದ್ದರು.

ಹಣವಂತರ ಚುನಾವಣೆ ಎಂದ ಗುಣವಂತರು!: ಗೆದ್ದವರೆಲ್ಲ ಸೇರಿ, ಇಬ್ಬರನ್ನು ಗೆಲ್ಲಿಸುವ ಚುನಾವಣೆಯೇ ಈ ವಿಧಾನ ಪರಿಷತ್‌ ಚುನಾವಣೆ. ಗ್ರಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರು ಇಲ್ಲಿ ಮತದಾರರು. ಇವರೆಲ್ಲ ತಮ್ಮ ತಮ್ಮಚುನಾವಣೆಯಲ್ಲಿ ಗೆಲ್ಲಲು ಮಾಡಿದ ಪ್ರಯಾಸವೇ ಈಗಿನ ಅಭ್ಯರ್ಥಿಗಳೂ ಮಾಡುವುದು ಸಹಜ.

Advertisement

ಗ್ರಾಪಂ ಸದಸ್ಯರು, ತಮ್ಮ ವಾರ್ಡ್‌ನಲ್ಲಿ ಆಯ್ಕೆಯಾಗಲು ಸಾಕಷ್ಟು ತನು-ಮನ-ಧನ ಹಾಕಿರುತ್ತಾರೆ. ಹೀಗಾಗಿ ಪರಿಷತ್‌ ಚುನಾವಣೆಯಲ್ಲಿ ಅವರೂ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ. ಇದೆಲ್ಲದರ ಮಧ್ಯೆ ಪಕ್ಷನಿಷ್ಠೆ, ಪ್ರತಿಷ್ಠೆಗಳೂ ಇಲ್ಲಿ ಅತಿಹೆಚ್ಚು ಲೆಕ್ಕಕ್ಕೆ ಬರುತ್ತವೆ.

ಈ ಬಾರಿಯ ಪರಿಷತ್‌ ಚುನಾವಣೆಯಲ್ಲಿ ಸುಮಾರು 18 ವರ್ಷಗಳ ಕಾಲ ಹಲವು ರೀತಿ ರಾಜಕೀಯ ವನವಾಸ ಅನುಭವಿಸಿದ ಮಾಜಿ ಶಾಸಕ ಪಿ.ಎಚ್‌. ಪೂಜಾರ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದ್ದು, ಹಲವರಿಗೆ ಅವರು ಗೆಲ್ಲಲೇಬೇಕುಎಂಬ ಅನುಕಂಪದ ಮಾತುಗಳನ್ನಾಡಿದ್ದಾರೆ. ಆದರೆ, ಪೂಜಾರರು ಗೆಲ್ಲಬೇಕು ಎಂಬುವವರೆಲ್ಲ ಪಕ್ಷನಿಷ್ಠರು, ಪರಿವಾರದ ಹಿರಿಯರು. ಆದರೆ,ಅದರಲ್ಲಿ ಬಹುತೇಕರು ಮತ ಹೊಂದಿದವರಲ್ಲ. ಇನ್ನು ಪೂಜಾರರು ಜಾತಿ ನಂಬಿ ರಾಜಕೀಯ ಮಾಡಿದವರೂ ಅಲ್ಲ. ಹೀಗಾಗಿ ಬಹುತೇಕರು ಅವರು ಗೆಲ್ಲಲಿ ಎಂದದ್ದೇ ಹೆಚ್ಚು.

ಸುನೀಲಗೌಡ-ಪೂಜಾರ ಹೆಸರು ಮುಂಚೂಣಿ ?: ಪರಿಷತ್‌ ಚುನಾವಣೆಯ ಮತದಾನ ಮುಗಿದ ಬಳಿಕ ಹಲವು ರೀತಿಯ

ಲೆಕ್ಕಾಚಾರಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ತಮ್ಮ ಪಕ್ಷದ ಬಂಡಾಯ ಅಭ್ಯರ್ಥಿಯ ಹೊಡೆತ ಎದುರಿಸಲು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಸುನೀಲಗೌಡ ಪಾಟೀಲ ಎಲ್ಲ ರೀತಿಯ ಪರಿಶ್ರಮ ಹಾಕಿದ್ದಾರೆ. ಎರಡೂ ಜಿಲ್ಲೆಯಲ್ಲಿ ಪ್ರತಿಯೊಂದು ಮತಗಟ್ಟೆಗೂ ತಮ್ಮದೇ ವಿಶ್ವಾಸಿಕರನ್ನು ಬಿಟ್ಟು ಪ್ರಚಾರವೂ ಮಾಡಿದ್ದಾರೆ.ಜತೆಗೆ ಮತದಾನೋತ್ತರದ ವರದಿಯೂತರಿಸಿಕೊಂಡಿದ್ದಾರೆ. ಹೀಗಾಗಿ ಅವರ ಗೆಲುವು ಸುಲಭ ಎಂಬ ಲೆಕ್ಕಾಚಾರದ ಮಾತು ಅವರ ಬೆಂಬಲಿಗರಿಂದ ಕೇಳಿ ಬರುತ್ತಿವೆ.

ಇನ್ನು ಮಾಜಿ ಶಾಸಕ ಪಿ.ಎಚ್‌. ಪೂಜಾರ ಅವರಿಗೆ, ರಾಜ್ಯ-ದೇಶದಲ್ಲಿ ಆಡಳಿತ ನಡೆಸುವ ಪಕ್ಷದ ಬಲ, ತಳಮಟ್ಟದಲ್ಲೂ ಇರುವ ಕಾರ್ಯಕರ್ತರು, 15 ವಿಧಾನಸಭೆ ಕ್ಷೇತ್ರಗಳ ಪೈಕಿ ಅತಿಹೆಚ್ಚು ಶಾಸಕರು,ಇಬ್ಬರು ಸಂಸದರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಇರುವ ಪಕ್ಷದ ಬೆಂಬಲಿತರಆಡಳಿತ, ಮೂವರು ವಿಧಾನಪರಿಷತ್‌ ಸದಸ್ಯರ ಬಲ ಹೀಗೆ ಎಲ್ಲವೂ ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ಅವರ ಲೆಕ್ಕಾಚಾರ.

ಎರಡೂ ರಾಜಕೀಯ ಪಕ್ಷಗಳ ಮಧ್ಯೆ ತಮ್ಮದೇ ಆದ ಬೆಂಬಲಿಗರ-ಸಮಾನ ಮನಸ್ಕರರ ತಂಡ ಕಟ್ಟಿಕೊಂಡು ಎರಡೂ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಕೂಡ ಪ್ರಬಲ ಪೈಪೋಟಿ ನೀಡಿದ್ದಾರೆ. ಎರಡೂ ಪಕ್ಷಗಳಲ್ಲಿ ಇರುವ ಅಸಮಾಧಾನಿತರು ಅವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂಬ ಒಳಗುಟ್ಟು ಚರ್ಚೆಯೂ ನಡೆಯುತ್ತಿದೆ.

ಒಟ್ಟಾರೆ, ಎರಡು ಸ್ಥಾನಗಳಲ್ಲಿ ಗೆಲ್ಲಬೇಕಿದ್ದು, ಮೂವರಲ್ಲಿ ಪ್ರಬಲ ಪೈಪೋಟಿಯ ಚುನಾವಣೆ ಮುಗಿದಿದೆ. ಮತದಾನೋತ್ತರ ಗೆಲುವಿನ ಲೆಕ್ಕಾಚಾರದ ಮಾತು ಜೋರಾಗಿ ಕೇಳಿ ಬರುತ್ತಿವೆ. ಮೂವರು ಅಭ್ಯರ್ಥಿಗಳೂ ತಮ್ಮ ಪರವಾಗಿತಾಲೂಕುವಾರು ಬರಲಿರುವ ಮತಗಳ ಲೆಕ್ಕಮಾಡಿಕೊಂಡು, ಫಲಿತಾಂಶದ ದಿನಕ್ಕಾಗಿ ಕಾಯುತ್ತಿದ್ದಾರೆ. ಒಂದಂತೂ ಸತ್ಯ, ಗುಣವಂತರು ಹೇಳುವಂತೆ, ಇದು ಹಣವಂತರ ಚುನಾವಣೆ

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next