ಜಾರ್ಖಂಡ್: ಮಹಾರಾಷ್ಟ್ರದಲ್ಲಿ ಚುನಾವಣೆಗೂ ಮುನ್ನ ಶಿವಸೇನೆ ಜತೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿಗೆ ಸರ್ಕಾರ ರಚಿಸಲು ತೊಡಕಾಗಿರುವ ನಡುವೆಯೇ ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಲೋಕಜನ ಶಕ್ತಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಂಗಳವಾರ ಘೋಷಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದೆ.
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿ ಅಖಾಡಕ್ಕಿಳಿಯಲಿದ್ದು, 50 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಲೋಕಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
ನವೆಂಬರ್ 30ರಿಂದ 5 ಹಂತಗಳಲ್ಲಿ ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿ ಪಕ್ಷಗಳಾದ ಎಜೆಎಸ್ ಯು(ಆಲ್ ಇಂಡಿಯಾ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್) ಮತ್ತು ಎಲ್ ಜೆಪಿ ಸೀಟು ಹಂಚಿಕೆ ಸೂತ್ರದ ಮೂಲಕ ಚುನಾವಣೆ ಎದುರಿಸಲು ಒಪ್ಪಿಗೆ ಸೂಚಿಸಿದ್ದವು.
ಚಿರಾಗ್ ನೇತೃತ್ವದ ಲೋಕ್ ಜನಶಕ್ತಿ ಪಕ್ಷ 2014ರ ಚುನಾವಣೆ ವೇಳೆ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿತ್ತು. ಅದರಲ್ಲಿಯೂ ಸೋಲು ಕಂಡಿತ್ತು. ಈ ಬಾರಿ ಬಿಜೆಪಿ ಜತೆ ಮೈತ್ರಿಯಾಗಬೇಕಾದರೆ ಆರು ಸ್ಥಾನ ನೀಡಬೇಕೆಂದು ಕೇಳಿತ್ತು. ಇದೀಗ 50 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಎಲ್ ಜೆಪಿ ಸ್ಪರ್ಧಿಸಲು ಮುಂದಾಗಿದೆ.
ಮತ್ತೊಂದೆಡೆ ಬಿಜೆಪಿ ಮೈತ್ರಿಪಕ್ಷವಾದ ಆಲ್ ಇಂಡಿಯಾ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್ ಯು) 2014ರಲ್ಲಿ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಐದರಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ 19 ಕ್ಷೇತ್ರಗಳನ್ನು ನೀಡಬೇಕೆಂದು ಬಿಜೆಪಿ ಬಳಿ ಬೇಡಿಕೆ ಇಟ್ಟಿತ್ತು. ಆದರೆ ಬಿಜೆಪಿ 9 ಸ್ಥಾನಕ್ಕಿಂತ ಹೆಚ್ಚು ನೀಡುವುದಿಲ್ಲ ಎಂದು ತಿಳಿಸಿದ್ದು, ಎಜೆಎಸ್ ಯು ಈಗಾಗಲೇ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಪ್ರಾದೇಶಿಕ ಪಕ್ಷಗಳು ಸ್ಪರ್ಧೆಯೊಡ್ಡುವುದು ಖಚಿತವಾದಂತಾಗಿದೆ.