ಕೋಲ್ಕತಾ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನಾದ ಶಾಸಕರು ಬಂಡಾಯವೆದ್ದು ಅಸ್ಸಾಂನ ಗುವಾಹಟಿಯ ಐಶಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವ ಮೂಲಕ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಸರ್ಕಾರ ಪತನದ ಅಂಚಿನಲ್ಲಿದೆ. ಅದೇ ರೀತಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಕೂಡಾ ಅವಧಿಗೂ ಮುನ್ನವೇ ಪತನವಾಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಸುವೇಂದು ಅಧಿಕಾರಿ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:ಇಡಿ ನೋಟಿಸ್, ಪಾರ್ಟಿ ಮೀಟಿಂಗ್: ದೆಹಲಿಗೆ ಹೊರಟ ಡಿಕೆ ಶಿವಕುಮಾರ್
ಮಹಾರಾಷ್ಟ್ರ ಸರ್ಕಾರ ಪತನಗೊಂಡ ನಂತರ ಬಿಜೆಪಿಯೇತರ ರಾಜ್ಯಗಳಾದ ಜಾರ್ಖಂಡ್ ಮತ್ತು ರಾಜಸ್ಥಾನ್ ಸರ್ಕಾರ ಕೂಡಾ ಅದೇ ಹಾದಿ ಹಿಡಿಯಲಿದೆ. ಬಳಿಕ ಪಶ್ಚಿಮಬಂಗಾಳದ ಟಿಎಂಸಿ ಸರದಿ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೂಚ್ ಬೆಹಾರ್ ಜಿಲ್ಲೆಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಧಿಕಾರಿ, ಮೊದಲು ಮಹಾರಾಷ್ಟ್ರದ ಬಿಕ್ಕಟ್ಟನ್ನು ಪರಿಹರಿಸಬೇಕಾಗಿದೆ. ನಂತರ ಜಾರ್ಖಂಡ್, ರಾಜಸ್ಥಾನ ಸರ್ಕಾರಗಳ ಸರದಿ, ಆ ಬಳಿಕ ಪಶ್ಚಿಮಬಂಗಾಳಕ್ಕೂ ಇದೇ ಪರಿಸ್ಥಿತಿ ಎದುರಾಗಲಿದೆ. ಈ ಸರ್ಕಾರಗಳು 2026ರವರೆಗೆ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ. 2024ರೊಳಗೆ ಈ ಸರ್ಕಾರಗಳನ್ನು ಕಿತ್ತೊಗೆಯಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಸುವೇಂದು ಅಧಿಕಾರಿ ಹೇಳಿಕೆಗೆ ಟಿಎಂಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ ಕೇಸರಿ ಪಾಳಯ ಅಧಿಕಾರಕ್ಕಾಗಿ ಹತಾಶ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದೆ.