Advertisement
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಮತದಾನದಲ್ಲಿ ಕ್ಷೇತ್ರದ್ಯಾಂತ ಒಟ್ಟಾರೆ ಶೇ.76.98 ರಷ್ಟು ಮತದಾನ ಆಗಿರುವುದು ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದ್ದು, ಈ ಬಾರಿ ಹೆಚ್ಚಿನ ಮತದಾನ ಆಗಿರುವುದು ಯಾರಿಗೆ ಲಾಭ? ಯಾರಿಗೆ ನಷ್ಟ ಎನ್ನುವ ಲೆಕ್ಕಾಚಾರ ಕ್ಷೇತ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.
Related Articles
Advertisement
ಕ್ಷೇತ್ರದ ಒಟ್ಟಾರೆ ಮತದಾನ ಪ್ರಮಾಣ, ಕ್ಷೇತ್ರದಲ್ಲಿರುವ ಜಾತಿವಾರು ಮತದಾರರ ಪ್ರಮಾಣವನ್ನು ಉಲ್ಲೇಖೀಸಿಕೊಂಡು ಈ ಪಕ್ಷದ ಅಭ್ಯರ್ಥಿ ಇಷ್ಟೇ ಮತ ಪಡೆಯುತ್ತಾರೆಂದು ಹೇಳುವ ಮೂಲಕ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರು ವಿಶ್ವಾಸದಿಂದ ಹೇಳಿಕೊಳ್ಳುವ ಮೂಲಕ ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಮುಳಗಿದ್ದಾರೆ.
ಕುತೂಹಲ ಕೆರಳಿಸಿರುವ ಹೊಸಕೋಟೆ, ಯಲಹಂಕ, ದೇವನಹಳ್ಳಿ ಕ್ಷೇತ್ರ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಿಂದ ಹೆಚ್ಚು ಗಮನ ಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಹೊಸಕೋಟೆ ಹಾಗೂ ಯಲಹಂಕ ಕ್ಷೇತ್ರ. ಹೊಸಕೋಟೆ ಅತಿ ಹೆಚ್ಚು ದಾಖಲೆ ಮತದಾನಕ್ಕೆ ಸಾಕ್ಷಿಯಾದರೆ ಯಲಹಂಕ ಕಡಿಮೆ ಮತದಾನಕ್ಕೆ ಸಾಕ್ಷಿಯಾಗುತ್ತಿದೆ. ಹೊಸಕೋಟೆ ರಾಜಕೀಯವಾಗಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರ. ಯಲಹಂಕ, ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರ. ಕಳೆದ ಬಾರಿ ಹೊಸಕೋಟೆ ಬಚ್ಚೇಗೌಡರಿಗೆ 10 ಸಾವಿರ ಮತಗಳ ಅಂತರ ತಂದುಕೊಟ್ಟಿತ್ತು. ಯಲಹಂಕ 75 ಸಾವಿರಕ್ಕೂ ಅಧಿಕ ಮತಗಳ ಅಂತರ ತಂದುಕೊಟ್ಟಿತ್ತು. ಆದರೆ ಈ ಬಾರಿ ಗೌರಿಬಿದನೂರು, ಬಾಗೇಪಲ್ಲಿ ಕ್ಷೇತ್ರದಲ್ಲಿ ಶೇ.79 ರಷ್ಟು ಮತದಾನ ಮಾಡಿದ್ದು, ಕಾಂಗ್ರೆಸ್, ಬಿಜೆಪಿ ನಡುವೆ ಮತಗಳಿಕೆಯಲ್ಲಿ ತೀವ್ರ ಪೈಪೋಟಿ ನಡೆದಿರುವುದು ಮತಗಟ್ಟೆ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನೂ ದೇವನಹಳ್ಳಿ, ಚಿಕ್ಕಬಳ್ಳಾಪುರ ಕ್ಷೇತ್ರಗಳು ಕೂಡ ಈ ಬಾರಿ ಲೋಕಸಭಾ ಚುನಾವಣೆ ಫಲಿತಾಂಶ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಮಾತು ಕೇಳಿ ಬರುತ್ತಿದೆ.
19.81ಲಕ್ಷದಲ್ಲಿ 15.25 ಲಕ್ಷ ಮಂದಿ ಮತ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 9,83,775 ಮಂದಿ ಪುರುಷರು , 9,97,306 ಮಂದಿ ಮಹಿಳೆಯರು, ಇತರೇ 266 ಮಂದಿ ಸೇರಿ ಒಟ್ಟು 19,81,347 ಮಂದಿ ಮತದಾರರು ಇದ್ದರು. ಆ ಪೈಕಿ ಚುನಾವಣೆಯಲ್ಲಿ ಬರೋಬ್ಬರಿ 7,66,151 ಮಂದಿ ಪುರುಷರು ತಮ್ಮ ಹಕ್ಕು ಚಲಾವಣೆ ಮಾಡಿದರೆ 7,58,952 ಮಂದಿ ಮಹಿಳೆಯರು ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಇತರೇ 266 ಮಂದಿ ಪೈಕಿ 96 ಮಂದಿ ಮಾತ್ರ ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ 15,25,199 ಮಂದಿ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಮತದ ಲೆಕ್ಕ
ರಾಜಕೀಯ ಪಕ್ಷಗಳು ಒಂದಡೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮತ ಎಣಿಕೆ ಬಳಿಕ ಹೊರ ಬೀಳುವ ಫಲಿತಾಂಶದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ಮತಗಟ್ಟೆವಾರು ಮತದ ಲೆಕ್ಕಾಚಾರ ನಡೆಸುತ್ತಿದ್ದರೆ ಮತ್ತೂಂದಡೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೂಡ ಚುನಾವಣೆಯ ಸೋಲು, ಗೆಲುವಿನ ಲೆಕ್ಕಾಚಾರದ ಭರಾಟೆ ಮುಗಿಲು ಮುಟ್ಟಿದೆ.
ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೇ ಜನ ಸೇರುವ ಟೀ ಅಂಗಡಿ, ಕಟ್ಟಿಂಗ್ ಶಾಪ್, ಹೋಟೆಲ್, ಸಾರ್ವಜನಿಕ ಬಸ್ ನಿಲ್ದಾಣ, ಸಂತೆ, ಎಪಿಎಂಸಿ ಮಾರುಕಟ್ಟೆ ಮತ್ತಿತರ ಕಡೆಗಳಲ್ಲಿ ಚುನಾವಣಾ ಸಮರದ ಫಲಿತಾಂಶ ಬಗ್ಗೆಯೆ ಹೆಚ್ಚು ಚರ್ಚೆ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶದಲ್ಲೂ ಕೂಡ ಗುಂಪು ಗುಂಪುಗಳಾಗಿ ಜನ ಸೇರಿರುವ ಕಡೆ ಸೋಲು, ಗೆಲುವಿನ ಲೆಕ್ಕಾಚಾರದ್ದೆ ಮಾತು ಕೇಳಿ ಬರುತ್ತಿದೆ.
ಸಿಪಿಎಂ, ಬಿಎಸ್‌ಪಿ ಮತಗಳಿಕೆ ಬಗ್ಗೆ ಗಹನ ಚರ್ಚೆ:
ಕ್ಷೇತ್ರದಲ್ಲಿ ಈ ಬಾರಿಯು ಕೂಡ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ (ಸಿಪಿಎಂ) ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಅಲ್ಲದೇ ಬಹುಜನ ಸಮಾಜ ಪಕ್ಷ ತನ್ನ ಅಭ್ಯರ್ಥಿಕ್ಕೆ ಅಖಾಡಕ್ಕೆ ಇಳಿಸಿತ್ತು. ಇದೇ ಮೊದಲ ಬಾರಿಗೆ ಎಸ್‌ಯುಸಿಐ ಪಕ್ಷ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಹೀಗಾಗಿ ಬಾಗೇಪಲ್ಲಿ ಕ್ಷೇತ್ರದಲ್ಲಿ ದಟ್ಟ ಪ್ರಭಾವ ಹೊಂದಿರುವ ಸಿಪಿಎಂ ಪಕ್ಷ ಕ್ಷೇತ್ರದಲ್ಲಿ ಗಳಿಸುವ ಮತಗಳ ಬಗ್ಗೆಯು ಚುನಾವಣಾ ಫಲಿತಾಂಶದ ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
–ಕಾಗತಿ ನಾಗರಾಜಪ್ಪ