ಹೊಸದಿಲ್ಲಿ : ಐತಿಹಾಸಿಕ ವ್ಯಕ್ತಿಗಳ ಪ್ರತಿಮೆ ಧ್ವಂಸ ಪ್ರಕರಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುಗ್ರವಾಗಿ ಖಂಡಿಸಿದ ಹೊರತಾಗಿಯೂ ಕೋಲ್ಕತದ ಕಾಲೀಘಾಟ್ ಪ್ರದೇಶದಲ್ಲಿರುವ ಬಿಜೆಪಿ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಎದೆ ಮಟ್ಟದ ಪ್ರತಿಮೆಗೆ ವಿಧ್ವಂಸಕರು ಶಾಯಿ ಎರಚಿ ಪ್ರತಿಮೆಯ ಒಂದು ಭಾಗವನ್ನು ಮುರಿದಿದ್ದಾರೆ.
ತ್ರಿಪುರದಲ್ಲಿ ಕಳೆದ ಭಾನುವಾರ ಲೆನಿನ್ ಮತ್ತು ಮಂಗಳವಾರ ಪೆರಿಯಾರ್ ಅವರ ಪ್ರತಿಮೆಗಳನ್ನು ವಿಧ್ವಂಸಕರು ಧ್ವಂಸಮಾಡಿದ್ದು ಆ ದುಷ್ಕೃತ್ಯವನ್ನು ವ್ಯಾಪಕವಾಗಿ ಖಂಡಿಸಲಾಗಿತ್ತು.
ಕಾಲೀಘಾಟ್ ಪ್ರದೇಶದಲ್ಲಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಎದೆ ಮಟ್ಟದ ಪ್ರತಿಮೆಯನ್ನು ಇಂದು ಬೆಳಗ್ಗೆ ವಿಧ್ವಂಸಕರು ಕಪ್ಪು ಶಾಯಿ ಎರಚಿ ಅದರ ಒಂದು ಭಾಗವನ್ನು ಮುರಿದು ಹಾಕಿದರು.
ಈ ರೀತಿ ಪ್ರತಿಮೆಯನ್ನು ಭಂಜಿಸಿದವರು ಜಾಧವಪುರ ವಿವಿ ವಿದ್ಯಾರ್ಥಿಗಳೆಂದು ವರದಿಯಾಗಿದೆ. ಪ್ರತಿಮೆಯನ್ನು ವಿರೂಪ ಗೊಳಿಸಿ ಪಲಾಯನ ಮಾಡುವಾಗ ದಾರಿ ಹೋಕರು ಓರ್ವ ವಿಧ್ವಂಸಕನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಕರೆ ಮಾಡಿದರು.
ಪ್ರತಿಮೆ ವಿರೂಪಗೊಳಿಸುವ ಕೃತ್ಯದಲ್ಲಿ ತೊಡಗಿದ್ದ ಐವರು ಆರೋಪಿಗಳಲ್ಲಿ ಒಬ್ಟಾಕೆ ಮಹಿಳೆ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪ್ರತಿಮೆಯ ಕೆಳಗೆ ಒಂದು ಪೋಸ್ಟರ್ ಇರಿಸಲಾಗಿದ್ದು ಅದರಲ್ಲಿ “ತ್ರಿಪುರದಲ್ಲಿ ಕಳೆದ ವಾರ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಕ್ಕೆ ಇದು ಪ್ರತೀಕಾರದ ಕ್ರಮವಾಗಿದೆ’ ಎಂದು ಬರೆಯಲಾಗಿತ್ತು.
ಪ್ರತಿಮೆ ವಿಧ್ವಂಸಕರು ಯಾರೇ ಇರಲಿ, ಅವರನ್ನು ಹಿಡಿದು ಕಾನೂನುಪ್ರಕಾರ ಅವರಿಗೆ ಕಠಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ದಿಲ್ಲಿಯಲ್ಲಿನ ಬಿಜೆಪಿ ವರಿಷ್ಠರು ಹೇಳಿದ್ದಾರೆ.