ಕೊಲಂಬೋ: ಶ್ರೀಲಂಕಾ ವಿರುದ್ಧದ ಸರಣಿ ಅಂತ್ಯವಾದರೂ ಕೋವಿಡ್ ಕಾಟ ಮಾತ್ರ ಮುಗಿದಿಲ್ಲ. ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೆಲವು ದಿನಗಳ ಹಿಂದೆಯಷ್ಟೇ ಕೋವಿಡ್ ಸೋಂಕು ದೃಢವಾಗಿತ್ತು. ಇದೀಗ ಮತ್ತಿಬ್ಬರು ಭಾರತೀಯ ಆಟಗಾರರಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಪ್ರಮುಖ ಬೌಲರ್ ಯುಜುವೇಂದ್ರ ಚಾಹಲ್ ಮತ್ತು ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಗೆ ಕೋವಿಡ್ ಸೋಂಕು ದೃಢವಾಗಿದೆ.
ಇದನ್ನೂ ಓದಿ:ಹಾಕಿ: ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದ ವನಿತೆಯರು, ಒಲಿಂಪಿಕ್ ಕನಸು ಜೀವಂತ
ಜು.27ರಂದು ಕೃನಾಲ್ ಪಾಂಡ್ಯಗೆ ಕೋವಿಡ್ ಸೋಂಕು ದೃಢವಾಗಿತ್ತು. ಅವರೊಂದಿಗೆ ಸಂಪರ್ಕಕ್ಕೆ ಬಂದ 9 ಮಂದಿ ಆಟಗಾರರನ್ನು ಪ್ರತ್ಯೇಕಿಸಲಾಗಿತ್ತು. ಯುಜುವೇಂದ್ರ ಚಾಹಲ್ ಮತ್ತು ಕೃಷ್ಣಪ್ಪ ಗೌತಮ್ ಕೂಡಾ ಐಸೋಲೇಶನ್ ಗೆ ಒಳಗಾಗಿದ್ದರು. ಬಳಿಕ ಮತ್ತೆ ಅವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಈ ಇಬ್ಬರ ವರದಿ ಪಾಸಿಟಿವ್ ಆಗಿದೆ.
ಲಂಕಾ ಸರಣಿಗೆ ಆರಂಭದಲ್ಲೇ ಕೋವಿಡ್ ಕಾಟ ಎದುರಾಗಿತ್ತು, ಲಂಕಾ ತಂಡದ ಸದಸ್ಯರು ಕೋವಿಡ್ ಸೋಂಕಿಗೆ ಒಳಗಾದ ಕಾರಣ ಸರಣಿಯನ್ನು ಐದು ದಿನ ಮುಂದೂಡಲಾಗಿತ್ತು.
ಎರಡನೇ ಟಿ20 ಪಂದ್ಯದ ಆರಂಭಕ್ಕೂ ಮುನ್ನ ಕೃನಾಲ್ ಪಾಂಡ್ಯಗೆ ಸೋಂಕು ದೃಢವಾಗಿತ್ತು. ಇದರಿಂದ ತಂಡದ ಪ್ರಮುಖ 9 ಮಂದಿ ಆಟಗಾರರು ಐಸೋಲೇಶನ್ ಗೆ ಒಳಗಾಗಿದ್ದರು. ಹೀಗಾಗಿ ಸಂಪೂರ್ಣ ಅನನುಭವಿ ಆಟಗಾರರೊಂದಿಗೆ ಭಾರತ ಆಡಬೇಕಾಯಿತು. ನಂತರದ ಎರಡೂ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿದೆ.