Advertisement

ಕಾರಂತರ ಅನಂತರದ ಸ್ಥಾನ ಅಮೃತ ಸೋಮೇಶ್ವರರದ್ದು: ಡಾ| ಪ್ರಭಾಕರ ಜೋಶಿ

03:38 PM Jan 29, 2024 | Team Udayavani |

ಹಂಪನಕಟ್ಟೆ: ಸಾಹಿತಿಯಾಗಿ, ಪ್ರಸಂಗಕರ್ತನಾಗಿ, ಅಧ್ಯಾಪಕನಾಗಿ, ಸಾಮಾಜಿಕ ಕಾಳಜಿಯ ವ್ಯಕ್ತಿಯಾಗಿ ಕರಾವಳಿಯಲ್ಲಿ ಕಾರಂತರ ಅನಂತರದ ಸ್ಥಾನವನ್ನು ಪಡೆದವರು ಅಮೃತ ಸೋಮೇಶ್ವರರು ಎಂದು ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅವರು ಹೇಳಿದರು.

Advertisement

ಸನಾತನ ನಾಟ್ಯಾಲಯ ಮಂಗಳೂರು ವತಿಯಿಂದ ನಗರದ ಕುದ್ಮುಲ್‌ ರಂಗ ರಾವ್‌ ಪುರಭವನದಲ್ಲಿ ರವಿವಾರ “ನುಡಿನಮನ – ನೃತ್ಯಾಂಜಲಿ – ನೃತ್ಯ ರೂಪಕ’ ಕಾರ್ಯಕ್ರಮದಲ್ಲಿ ಡಾ| ಅಮೃತ ಸೋಮೇಶ್ವರ, ಸಂಗೀತ ವಿದುಷಿ ಶೀಲಾ ದಿವಾಕರ್‌ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.

ಅಮೃತರಂತಹವರು ಸಿಗುವುದು ದುರ್ಲಬ. ಅವರು ಯಕ್ಷಗಾನ -ನೃತ್ಯ-ನಾಟಕ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯ ಎಂದರು. ಶೀಲಾ ದಿವಾಕರ್‌ ಅವರು ಲಕ್ಷ್ಮೀ, ಸರಸ್ವತಿ ಕಲಾ ಸಂಪನ್ನೆಯಾಗಿದ್ದರು. ಗಾಯನದ ಮೂಲಕ ಭರತನಾಟ್ಯ ಕ್ಷೇತ್ರಕ್ಕೆ ನೀಡಿದ
ಕೊಡುಗೆ ಅಪಾರ. ಅವರ ಆದರ್ಶಗಳು ಹೊಸಬರಿಗೆ ಸ್ಫೂರ್ತಿ ನೀಡಲಿ ಎಂದರು.

ಸಜ್ಜನಿಕೆಯ ಸಾಕಾರ ಮೂರ್ತಿ
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಅಮೃತ ಸೋಮೇಶ್ವರರು ಸಜ್ಜನಿಕೆಯ ಸಾಕಾರ
ಮೂರ್ತಿಯಾಗಿದ್ದು, ಶಿಷ್ಯಂದಿರಿಗೆ ಅಚ್ಚುಮೆಚ್ಚಿನ ಗುರುವಾಗಿದ್ದರು. ಎಲ್ಲರನ್ನೂ ಒಳಗೊಳ್ಳುವ, ಅನುಭವಿಸಿ ಬರೆಯುವ ನಿಜ ಅರ್ಥದ ಕವಿಯಾಗಿದ್ದರು. ಶೀಲಾ ದಿವಾಕರ್‌ ಅವರು ಭಾರತೀಯ ಸಂಸ್ಕೃತಿಯ ಸಾಕ್ಷಾತ್ಕಾರ ವಾಗಿದ್ದರು. ಶಿಷ್ಯಂದಿರಿಗೂ ಭಾರತೀಯತೆಯನ್ನು ಧಾರೆಯೆರೆದಿದ್ದರು ಎಂದರು.

ಶೀಲಾ ದಿವಾಕರ್‌ ಅವರ ಪತಿ ದಿವಾಕರ್‌, ಅಮೃತ ಸೋಮೇಶ್ವರ ಅವರ ಪುತ್ರ ಜೀವನ್‌ ಅಮೃತ್‌ ಸೋಮೇಶ್ವರ, ನೃತ್ಯಗುರು ವಿದುಷಿ ಶಾರಾದಾಮಣಿ ಶೇಖರ್‌ ಉಪಸ್ಥಿತರಿದ್ದರು. ನಿರ್ದೇಶಕ ಚಂದ್ರಶೇಖರ್‌ ಕೆ. ಶೆಟ್ಟಿ ಸ್ವಾಗತಿಸಿದರು.

Advertisement

ಭರತನಾಟ್ಯ, ನೃತ್ಯ ರೂಪಕ
ನುಡಿನಮನದ ಬಳಿಕ ಶೀಲಾ ದಿವಾಕರ್‌ ಅವರು ಹಾಡಿರುವ ಹಾಡುಗಳಿಗೆ ಮಕ್ಕಳಿಂದ ಭರತನಾಟ್ಯ, ಅಮೃತ ಸೋಮೇಶ್ವರ ಅವರ ರಚನೆಯ ಸತ್ಯನಾಪುರದ ಸಿರಿ ನೃತ್ಯ ರೂಪಕ ಪ್ರಸ್ತುತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next