ನವದೆಹಲಿ: ಪಾಕಿಸ್ತಾನದ ಐಎಸ್ ಐ(ಇಂಟರ್ ಸರ್ವಿಸ್ ಇಂಟೆಲಿಜೆನ್ಸ್)ಗೆ ವರ್ಗೀಕೃತ ರಹಸ್ಯ ದಾಖಲೆಗಳನ್ನು ರವಾನಿಸಿದ ಆರೋಪದ ಮೇಲೆ ಭಾರತೀಯ ಯೋಧ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ(ಜುಲೈ15) ತಿಳಿಸಿದ್ದಾರೆ.
ಇದನ್ನೂ ಓದಿ:ಜು.21ರಂದು ಕೆಲವು ಶಾಸಕರೊಂದಿಗೆ ದೆಹಲಿಗೆ ಹೋಗುತ್ತೇನೆ: ರೇಣುಕಾಚಾರ್ಯ
ದಾಖಲೆಯನ್ನು ಐಎಸ್ ಐಗೆ ಕಳುಹಿಸಿರುವ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಸೇನಾ ಕೇಂದ್ರ ಕಚೇರಿ ಸ್ಪಷ್ಟಪಡಿಸಿದೆ. ರಾಜಸ್ಥಾನದ ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್ ನಲ್ಲಿ 34 ವರ್ಷದ ತರಕಾರಿ ಸರಬರಾಜುದಾರನನ್ನು ಬಂಧಿಸಿದ ಬಳಿಕ ಸೇನೆಯ ವ್ಯಕ್ತಿಯೊಬ್ಬರಿಂದ ಸೂಕ್ಷ್ಮ ದಾಖಲೆಗಳನ್ನು ಪಡೆದುಕೊಂಡು ಪಾಕಿಸ್ತಾನದ ಐಎಸ್ ಐಗೆ ಒದಗಿಸುತ್ತಿರುವುದಾಗಿ ಬಾಯ್ಬಿಟ್ಟಿರುವುದಾಗಿ ವರದಿ ವಿವರಿಸಿದೆ.
ತರಕಾರಿ ಸರಬರಾಜುದಾರನನ್ನು ಹಬೀಬ್ ಖಾನ್ ಅಲಿಯಾಸ್ ಹಬೀಬುರ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಈತನನ್ನು ಪೋಖ್ರಾನ್ ನಿಂದ ಪೊಲೀಸರು ವಶಕ್ಕೆ ಪಡೆದು ಮಂಗಳವಾರ ದೆಹಲಿಗೆ ಕರೆ ತಂದಿದ್ದರು ಎಂದು ವರದಿ ತಿಳಿಸಿದೆ.
ರಕ್ಷಣೆಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ದಾಖಲೆಗಳನ್ನು ಪತ್ತೆದಾರಿ ಜಾಲದ ಮೂಲಕ ನೆರೆಯ ದೇಶಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ದೆಹಲಿ ಪೊಲೀಸರ ಅಪರಾಧ ದಳಕ್ಕೆ ಸಿಕ್ಕಿತ್ತು. ಈ ಆಧಾರದ ಮೇಲೆ ಪೋಖ್ರಾನ್ ನಲ್ಲಿರುವ ಹಬೀಬ್ ನಿವಾಸದ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದಾಗ ಕೆಲವು ಸೂಕ್ಷ್ಮ ದಾಖಲೆಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಈ ವ್ಯಕ್ತಿಯ ಜತೆ ಸೇನೆಯ ಯೋಧ ಪರಮ್ ಜಿತ್ ಸಂಪರ್ಕ ಹೊಂದಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಲ್ಲಿ ಪರಮ್ ಜಿತ್ ಹಣಕ್ಕಾಗಿ ದೇಶದ ಸೂಕ್ಷ್ಮ ಮಾಹಿತಿಯನ್ನು ಒದಗಿಸುತ್ತಿದ್ದಾನೆ ಎಂಬ ವಿಚಾರವನ್ನು ಹಬೀಬ್ ತಿಳಿಸಿದ್ದ. ಹಬೀಬ್ ಕಳೆದ ನಾಲ್ಕು ವರ್ಷಗಳಿಂದ ಐಎಸ್ ಐ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಮೂಲಗಳು ಹೇಳಿವೆ.