ಬೆಂಗಳೂರು:ಸಮಾಜದ ಕಣ್ತಪ್ಪಿಸಿ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ಊಹಾಪೋಹಗಳಿಗೆಲ್ಲಾ ಉತ್ತರಿಸಲ್ಲ. ನಮ್ಮ ಮನೆಯಲ್ಲಿ ಎಷ್ಟು ಕೋಟಿ ಸಿಕ್ಕಿದೆ ಅಂತ ಅಧಿಕಾರಿಗಳು ಹೇಳಿದ್ದಾರಾ? ಎಂದು ಸ್ಯಾಂಡಲ್ ವುಡ್ ನಟ ಯಶ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ತಾಯಿ ಪುಪ್ಪಾ ಜತೆ ಐಟಿ ಕಚೇರಿಗೆ ಆಗಮಿಸಿದ್ದ ಯಶ್, ವಿಚಾರಣೆ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆಗಿಯೇ ಉತ್ತರಿಸಿರುವ ಪ್ರಸಂಗ ನಡೆಯಿತು. ಯಶ್ ಗೆ 40 ಕೋಟಿ ಸಾಲ ಇದೆ, ಯಶ್ ಆಡಿಟರ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಹೀಗೆ ಸುಳ್ಳು, ಸುಳ್ಳು ವದಂತಿ ಯಾಕೆ ಹರಡುತ್ತೀರಿ ಎಂದು ಪ್ರಶ್ನಿಸಿದರು.
ನಮ್ಮ ಮನೆಯಲ್ಲಿ ಏನು ಸಿಕ್ಕಿದೆ ಎಂದು ಅಧಿಕಾರಿಗಳಿಗೆ ಗೊತ್ತು. ನನಗೆ 15ರಿಂದ 16 ಕೋಟಿ ರೂಪಾಯಿ ಸಾಲ ಇದೆ. ಅಷ್ಟು ಸಾಲ ಕೊಡಬೇಕಾದ್ರೆ ನಾನು ಆದಾಯ ತೆರಿಗೆ ಕಟ್ಟದೆ ಸಾಲ ಕೊಡುತ್ತಾರಾ? ಇದು ಸಾಮಾನ್ಯ ಜ್ಞಾನ. ಆದರೆ ತೇಜೋವಧೆ ಮಾಡ್ಕಂಡಿದ್ರೆ ನಾವು ನೋಡ್ಕಂಡು ಸುಮ್ಮನಿರಲ್ಲ. ನನಗೆ ಯಾರ ಮೇಲೂ ಪರ್ಸನಲ್ ಆಗಿ ಏನೂ ಇಲ್ಲ, ನೀವೂ(ಪತ್ರಕರ್ತರು) ಅದನ್ನು ಇಟ್ಕೊಳ್ಳಬೇಡಿ ಎಂದರು.
ನಮ್ಮ ಆಡಿಟರ್ ಕಚೇರಿಗೆ ತೆರಳಿದ್ದ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರಂತೆ. ಇದು ಸದ್ಯಕ್ಕೆ ಮುಗಿಯೋ ವಿಚಾರಣೆಯಲ್ಲ, ಇನ್ನೂ ಎರಡು ವರ್ಷಗಳ ಕಾಲ ಮುಂದುವರಿಯಬಹುದು. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ಯಶ್ ಹೇಳಿದರು.