ವಾಷಿಂಗ್ಟನ್: ನೀಲಿಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ಹಣ ಪಾವತಿ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಜ್ಯೂರಿಗಳಿಂದ ಘೋಷಣೆಗೊಂಡ ಬೆನ್ನಲ್ಲಿಯೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 4 ಮಿಲಿಯನ್ ಅಮೆರಿಕನ್ ಡಾಲರ್(32.80 ಕೋಟಿ ರೂ. ) ಮೊತ್ತ ಸಂಗ್ರಹಿಸಿದ್ದಾರೆ. ಒಟ್ಟು ಮೊತ್ತದ ಪೈಕಿ ಶೇ.25 ಮೊದಲ ಬಾರಿಗೆ ದೇಣಿಗೆ ಕೊಡುವವರಿಂದಲೇ ಸಂಗ್ರಹವಾಗಿದೆ ಎನ್ನುವುದು ಗಮನಾರ್ಹ.
ಇದರಿಂದಾಗಿ ರಿಪಬ್ಲಿಕನ್ ಪಕ್ಷದಲ್ಲಿ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಅವರೇ ಸೂಕ್ತ ಎಂಬ ಸಂದೇಶವನ್ನೂ ಪಕ್ಷದ ಇತರ ಸ್ಪರ್ಧಾಕಾಂಕ್ಷಿಗಳಿಗೆ ರವಾನೆ ಮಾಡಿದಂತಾಗಿದೆ.
ಟ್ರಂಪ್ ಅವರಿಗೆ ತಳಮಟ್ಟದಿಂದಲೇ ಬೆಂಬಲ ಇರುವುದನ್ನು ಸಹಿಸಲಾಗದೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೂಲಕ ಅವರನ್ನು ಮಟ್ಟ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮಾಜಿ ಅಧ್ಯಕ್ಷರ ಪ್ರಚಾರ ಸಮಿತಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆರೋಪಿಸಲಾಗಿದೆ. ದೇಶದ ಎಲ್ಲಾ 50 ಪ್ರಾಂತ್ಯಗಳಿಂದಲೂ ಅವರ ಪ್ರಚಾರಕ್ಕೆ ದೇಣಿಗೆ ಹರಿದು ಬರಲಾರಂಭಿಸಿದೆ ಎಂದು ಪ್ರತಿಪಾದಿಸಲಾಗಿದೆ.
ಟ್ರಂಪ್‌ಗೆ ಹೆದರುವುದಿಲ್ಲ:
ಇದೇ ವೇಳೆ, ಮಾಜಿ ಅಧ್ಯಕ್ಷರಿಗೆ ಹೆದರುವುದಿಲ್ಲ ಎಂದು ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ಸ್ ಹೇಳಿದ್ದಾರೆ. ಟ್ರಂಪ್‌ಗೆ ಏನಾದರೂ ಸಂಭವಿಸಿದಲ್ಲಿ ಅದರಿಂದ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದೂ ಹೇಳಿದ್ದಾರೆ.