ಹೊಸದಿಲ್ಲಿ : ಪಾಕಿಸ್ಥಾನದ ವಿರುದ್ಧ ನೆದರ್ಲಂಡ್ಸ್‌ನ ‘ದ ಹೇಗ್’ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮಹತ್ತರ ವಿಜಯವನ್ನು ಸಾಧಿಸಿರುವ ಭಾರತ, ಈಗಿನ್ನು ಪಾಕ್ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾಧವ್‌ಗೆ ನೀಡಿದ್ದ ಮರಣ ದಂಡನೆಯ ಶಿಕ್ಷೆಯ ರದ್ದತಿಯನ್ನು ಕೋರಲಿದೆ.
ಐಸಿಜೆ ಯಲ್ಲಿ ತನಗಾದ ಸೋಲಿನಿಂದ ತೀವ್ರ ಒತ್ತಡಕ್ಕೆ ಗುರಿಯಾಗಿರುವ ಪಾಕ್ ಸರಕಾರ ಇದೀಗ ಐಸಿಜೆಯಲ್ಲಿ ತನ್ನ ವಾದ ಮಂಡಿಸುವುದಕ್ಕೆ ಹೊ ನ್ಯಾಯವಾದಿಗಳನ್ನು ನೇಮಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ.
ಭಾರತೀಯ ಬೇಹುಗಾರನೆಂದು ಪರಿಗಣಿಸಿ ಪಾಕ್‌ನಲ್ಲಿ ಭಯೋತ್ಪಾದನೆ ಹಾಗೂ ವಿಧ್ವಂಸಕ ಕೃತ್ಯಗಳನ್ನು ಆಯೋಜಿಸಿದ್ದ ಎಂಬ ಆರೋಪದ ಮೇಲೆ ಭಾರತದ 46ರ ಹರೆಯದ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಗೆ ಪಾಕ್ ಮಿಲಿಟರಿ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆಯನ್ನು ಈ ಪ್ರಕರಣದ ವಿಚಾರಣೆ ಮುಗಿದು ತಾನು ತೀರ್ಪು ಪ್ರಕಟಿಸುವ ವರೆಗೆ ಜಾರಿ ಮಾಡಕೂಡದೆಂದು ಅಂತಾರಾಷ್ಟ್ರೀಯ ನ್ಯಾಯಾಲಯ ಪಾಕಿಸ್ಥಾನವನ್ನು ನಿರ್ಬಂಧಿಸಿರುವುದು ಐಸಿಜೆಯಲ್ಲಿ ಭಾರತಕ್ಕೆ ಸಂದಿರುವ ಅತ್ಯಂತ ಮಹತ್ವದ ವಿಜಯವೆಂದು ಎಲ್ಲೆಡೆ ಪರಿಗಣಿಸಲಾಗಿದೆ.
ಜಾಧವ್ ಗೆ ಪಾಕ್ ಮಿಲಿಟರಿ ಕೋರ್ಟ್ ನೀಡಿರುವ ಮರಣ ದಂಡನೆ ಶಿಕ್ಷೆಯ ರದ್ದತಿಯನ್ನು ಕೋರುವುದೇ ಈಗ ಭಾರತದ ಮುಂದಿರುವ ವಿಷಯವಾಗಿದ್ದು ಆತನಿಗೆ ಕಾನ್ಸುಲರ್ ಸಂಪರ್ಕಾವಕಾಶದ ಕೋರಿಕೆಯನ್ನು ಮಂಡಿಸುವದು ಮುಖ್ಯವಾಗಿಲ್ಲ ಎಂದು ಐಸಿಜೆಯಲ್ಲಿ ಭಾರತದ ಪರವಾಗಿ ಯಶಸ್ವೀ ವಾದ ಮಂಡಿಸಿ ಗೆದ್ದಿರುವ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಹೇಳಿದ್ದಾರೆ.