ವಿಜಯಪುರ: ಗೋಬಿ ಮಂಚೂರಿ ಹಾಗೂ ಕಬಾಬ್‌ಗ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿದ ಬೆನ್ನಲ್ಲೇ ಸರ್ಕಾರ ಪಾನಿಪೂರಿಯ ಪಾನಿಗೆ ಬಳಸುವ ವಸ್ತುಗಳಲ್ಲೂ ಕೃತಕ ಅಂಶಗಳನ್ನು ಬಳಸುವುದನ್ನು ನಿಷೇಧಿಸಲು ನಿರ್ಧರಿಸಿದೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ಆಹಾರ ಸುರಕ್ಷತಾ ಸಂಸ್ಥೆ ತಪಾಸಣೆ ಮಾಡಿದಾಗ ಗೋಬಿ ಮಂಚೂರಿ, ಪಾನಿಪೂರಿ, ಕಬಾಬ್ ಆಹಾರಕ್ಕೆ ಬಳಸುವ ಕೃತಕ ಬಣ್ಣದ ಅಂಶಗಳು ಆರೋಗ್ಯಕ್ಕೆ ಹಾನಿಕಾರಕ ಎನ್ನುವುದು ಕಂಡುಬಂದಿದೆ. ಹೀಗಾಗಿ ಪಾನಿಪುರಿಯ ಪಾನಿಗೂ ಕೃತಕ ಅಂಶಗಳ ಬಳಕೆ ಮಾಡುವುದನ್ನು ನಿಷೇಧಿ ಸಲಾಗುವುದು. ಆಹಾರಕ್ಕೂ ಆರೋಗ್ಯಕ್ಕೂ ಬಹಳ ಹತ್ತಿರದ ಸಂಬಂಧವಿದೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಗ್ಯಾರಂಟಿ ಪಕ್ಷದ ವಾಗ್ಧಾನ, ಸ್ಥಗಿತ ಅಸಾಧ್ಯ: ದಿನೇಶ್
ವಿಜಯಪುರ: ಗ್ಯಾರಂಟಿ ಯೋಜನೆಗಳು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಮೂಲಕ ನೀಡಿದ ವಾಗ್ಧಾನ. ಒಂದು ದಿನ ಗ್ಯಾರಂಟಿ ಕೊಡ್ತೀವಿ ಅನ್ನೋದು, ಮತ್ತೂಂದು ದಿನ ಸ್ಥಗಿತ ಮಾಡುತ್ತೇವೆ ಎನ್ನಲಾಗದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಕುರಿತು ಸ್ವಪಕ್ಷದ ಕೆಲವು ಶಾಸಕರು ಅಪಸ್ವರ ಎತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಅಭಿವೃದ್ಧಿಗೂ ಅನುದಾನ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ಹಿನ್ನಡೆ ಆಗಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರ ಹೇಳಿಕೆ ಏನೇ ಇದ್ದರೂ ಗ್ಯಾರಂಟಿ ಯೋಜನೆಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.