ನವದೆಹಲಿ: ಕಾಂಗ್ರೆಸ್ ನಾಯಕತ್ವ ಬದಲಾಗಬೇಕೆಂದು ಆಗ್ರಹಿಸುತ್ತಿರುವ ಜಿ-23 ಮುಖಂಡರ ಪೈಕಿ ಈಗಾಗಲೇ ಕಪಿಲ್ ಸಿಬಲ್ ಮತ್ತು ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಮತ್ತೊಬ್ಬ ಹಿರಿಯ ಮುಖಂಡ ಆನಂದ್ ಶರ್ಮಾ ಪಕ್ಷವನ್ನು ತೊರೆಯಲಿದ್ದಾರೆಯೇ ಎಂಬ ಊಹಾಪೋಹ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸೆ.13: ಸುರತ್ಕಲ್ ಟೋಲ್‌ಗೇಟ್ ತೆರವು ದಿನಾಂಕ ಘೋಷಣೆ ಒತ್ತಾಯಿಸಿ ಪ್ರತಿಭಟನೆ
ಗುಲಾಂ ನಬಿ ಆಜಾದ್ ಅವರು ರಾಜೀನಾಮೆ ನೀಡಿದ್ದ ಎರಡು ಗಂಟೆಗಳ ನಂತರ, ಆಜಾದ್ ಅವರ ಆಪ್ತ ಒಡನಾಡಿಯಾಗಿದ್ದ ಆನಂದ್ ಶರ್ಮಾ ಹಿಮಾಚಲ ಪ್ರದೇಶದ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಶುಕ್ರವಾರ (ಆಗಸ್ಟ್ 26) ತಡರಾತ್ರಿ ದೆಹಲಿಗೆ ಆಗಮಿಸಿರುವುದಾಗಿ ವರದಿ ವಿವರಿಸಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಸಲು ದಿನಾಂಕವನ್ನು ನಿಗದಿಗೊಳಿಸಲು ಸಿಡಬ್ಲ್ಹುಸಿ ಸಭೆ ಸೇರುವ ಒಂದು ದಿನದ ಮೊದಲು ಅಂದರೆ ಶನಿವಾರ (ಆ.27) ಶರ್ಮಾ ಅವರು ಆಜಾದ್ ಅವರನ್ನು ಭೇಟಿಯಾಗಲಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
ಕಳೆದ ಭಾನುವಾರ ಆನಂದ ಶರ್ಮಾ ಅವರು ಹಿಮಾಚಲ್ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲ ತಮ್ಮ ಗಮನಕ್ಕೆ ತಾರದೇ ಜಮ್ಮು-ಕಾಶ್ಮೀರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರವುದಕ್ಕೆ ಅಸಮಾಧಾನಗೊಂಡಿದ್ದ ಆಜಾದ್ ಕೂಡಾ ರಾಜೀನಾಮೆ ಸಲ್ಲಿಸಿದ್ದರು.
ಹಿಮಾಚಲ್ ಪ್ರದೇಶದಲ್ಲಿಯೂ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮುನ್ನ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ದೂರಿದ್ದಾರೆ.
ಆಜಾದ್ ಅವರ ರಾಜೀನಾಮೆ ಸುದ್ದಿ ಕೇಳಿ ಆಘಾತವಾಗಿದೆ. ಸದ್ಯದ ಪರಿಸ್ಥಿತಿ ಸಂಪೂರ್ಣವಾಗಿ ಕಡೆಗಣಿಸುವಂತಹದ್ದಲ್ಲ ಎಂದು ಆಜಾದ್ ತಿಳಿಸಿದ್ದಾರೆ. 2020ರ ಆಗಸ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಪ್ರಶ್ನಿಸಿ ಜಿ-23 ನಾಯಕರು ಸೋನಿಯಾಗಾಂಧಿಗೆ ಪತ್ರ ಬರೆದಿದ್ದರು.