ಬೆಳಗಾವಿ: ಜಿಲ್ಲೆಗೆ ಅಪ್ಪಳಿಸಿದ್ದ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡು ಕುಟುಂಬಕ್ಕೆ ನಾಲ್ಕು ತಿಂಗಳಾದರೂ ಇನ್ನೂ ನೆಲೆ ಸಿಕ್ಕಿಲ್ಲ. ಬದುಕಲು ಆಸರೆ ಇಲ್ಲದೇ ಇಡೀ ಕುಟುಂಬ ಸಮೀಪದ ಮಸೀದಿಯಲ್ಲಿ ಜೀವನ ಸಾಗಿಸುತ್ತಿದ್ದು, ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.
ಬೆಳಗಾವಿ ತಾಲೂಕಿನ ಸುಳೇಭಾವಿ ಪಿಂಜಾರ ಗಲ್ಲಿಯ ನೂರಅಹ್ಮದ ಮಹ್ಮದಗೌಸ ನದಾಫ ಎಂಬವರ ಕುಟುಂಬ ಕಳೆದ ನಾಲ್ಕು ತಿಂಗಳಿಂದ ಮಸೀದಿಯಲ್ಲಿಯೇ ಬದುಕು ಸಾಗಿಸುತ್ತಿದೆ. ಗ್ರಾಮ ಪಂಚಾಯಿತಿಗೆ ಹಾಗೂ ಗ್ರಾಮ ಲೆಕ್ಕಾಧಿಕಾರಿ ಬಳಿ ಅಂಗಲಾಚಿದರೂ ಪರಿಹಾರ ಮಾತ್ರ ಕೈ ಸೇರಿಲ್ಲ. ಮನೆ ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಕ್ಕೆ ಸಾಂತ್ವನ ಹೇಳುವವರೂ ಇಲ್ಲದಂತಾಗಿದೆ. 2019ರ ಜೂನ್, ಜುಲೈನಲ್ಲಿ ಸುರಿದ ಧಾರಾಕಾರ ಮಳೆಯಿಂದ ಮನೆಯ ಗೋಡೆಗಳು ಸ್ವಲ್ಪ ಪ್ರಮಾಣದಲ್ಲಿ ಕುಸಿದಿದ್ದವು. ಗೋಡೆಗಳು ಬೀಳುವ ಸ್ಥಿತಿಯಲ್ಲಿದ್ದರೂ ಆತಂಕದಲ್ಲಿಯೇ ಈ ಕುಟುಂಬದ ಜೀವನ ಸಾಗಿಸಿದೆ. ಆಗ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದು ದಾಖಲೆಗಳನ್ನು ಸಲ್ಲಿಸಿದೆ. ನಂತರ ಮತ್ತೆ ಕೆಲವು ದಿನಗಳ ಬಳಿಕ ಸುರಿದ ಮಳೆಯಲ್ಲಿ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಆಗ ಇಡೀ ಕುಟುಂಬ ಬೀದಿ ಪಾಲಾಗಿದೆ.
ಮನೆ ಕಳೆದುಕೊಂಡಿರುವ ಕುಟುಂಬಕ್ಕೆ ಯಾರೂ ಸಹಾಯಕ್ಕೆ ಬಾರದಿದ್ದಾಗ ಪಕ್ಕದ ಮಸೀದಿಯೇ ಆಸರೆಯಾಗಿದೆ. ಸರ್ಕಾರದಿಂದ ಬರಬೇಕಾಗಿದ್ದ 10 ಸಾವಿರ ರೂ. ತುರ್ತು ಪರಿಹಾರವೂ ಬರಲಿಲ್ಲ. ಅಲ್ಲಿ ಇಲ್ಲಿ ಸಾಲ ಮಾಡಿ ಕುಟುಂಬ ನಿರ್ವಹಣೆ ಮಾಡುವ ಸ್ಥಿತಿ ಬಂದೊದಗಿದೆ. ಮನೆ ಬಿದ್ದರೂ ಬಾಡಿಗೆ ಹಣವೂ ಸಿಕ್ಕಿಲ್ಲ. ಮತ್ತೂಮ್ಮೆ ಎಲ್ಲ ದಾಖಲೆಗಳನ್ನು ಸರಿಪಡಿಸಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಪಂನವರಿಗೆ ನೀಡಿದ್ದಾರೆ. ಆದರೆ ಇನ್ನೂ ಯಾವುದೇ ಸೌಲಭ್ಯ ಇಲ್ಲದೇ ಕುಟುಂಬ ಸಮಸ್ಯೆಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ನೂರಅಹ್ಮದ ಅವರು ಜಾನುವಾರುಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ಹಗ್ಗ, ಬಾರುಕೋಲು ತಯಾರಿಸುವ ಕೆಲಸ ಮಾಡುತ್ತಾರೆ. ಜತೆಗೆ ಜಾತ್ರೆ, ಉತ್ಸವಗಳಲ್ಲಿ ಊರಿನ ಚಾಕರಿ ಮಾಡುವ ತಾಸೆ, ಡೋಲ್ ಬಾರಿಸುವ ಕಾಯಕದಲ್ಲಿ ತೊಡಗುತ್ತಾರೆ. ಇದರಿಂದ ಬಂದ ಹಣದಲ್ಲಿಯೇ ಜೀವನ ಸಾಗಿಸುತ್ತಾರೆ. ಮಡದಿ, ಮಕ್ಕಳಿಲ್ಲದ ನೂರಅಹ್ಮದಗೆ ಹಿರಿಯ ಸಹೋದರಿ ಶಾಬೀರಾ ನದಾಫ ಸಹೋದರನ ಆಸರೆಗೆ ನಿಂತಿದ್ದಾರೆ.
ಮನೆ ಬಿದ್ದಾಗ ಎಂಜಿನಿಯರ್‌ಗಳು ಸ್ಥಳಕ್ಕೆ ಬಂದು ಸಮೀಕ್ಷೆ ನಡೆಸಿ ಹೋಗಿದ್ದಾರೆ. ಎರಡನೇ ಮೊದಲ ಪಟ್ಟಿಯಲ್ಲಿ ಈ ಕುಟುಂಬದ ಹೆಸರೇ ಇದ್ದಿರಲಿಲ್ಲ. ಮುಂದಾದರೂ ಬರಬಹುದು ಎಂದು ಕಾಯುತ್ತಿದ್ದ ಕುಟುಂಬಕ್ಕೆ ಎರಡನೇ ಪಟ್ಟಿಯಲ್ಲಿಯೂ ಹೆಸರು ಕೈ ಬಿಟ್ಟಿ ಹೋಗಿದೆ. ಸಂಬಂಧಿಸಿದವರ ಗಮನಕ್ಕೆ ತಂದು ನೂರಅಹ್ಮದ ರೋಸಿ ಹೋಗಿದ್ದಾರೆ. ಎಲ್ಲಾರೂ ಬರ್ತಾರೂ ಹೋಗ್ತಾರು. ಇನ್ನೂ ನಮ್ಮ ಮನಿಗಿ ರೊಕ್ಕಾ ಬಂದಿಲ್ಲ. ಬಂದಾವರದ್ದೆಲ್ಲ ಕೈ ಮುಗದ್ರೂ ಯಾರೂ ಇತ್ತ ಹಣಿಕಿ ಹಾಕವಲ್ರ. ಇದ್ದಾವ್ರು, ಇಲ್ದಾವ್ರಿಗೆ ಸರ್ಕಾರ ರೊಕ್ಕಾ ಜಮಾ ಮಾಡಾತೈತಿ. ನಾವ ಮನಿ ಕಳಕೊಂಡ ಮಸೋತ್ಯಾಗ ಇದ್ರೂ ಇತ್ತ ತಿರಗಿ ನೋಡವಾಲು¤ ಸರ್ಕಾರ ಎಂದು ಶಬೀರಾ ನದಾಫ ಹಿಡಿಶಾಪ ಹಾಕಿದರು.
ಮಳ್ಯಾಗ ಮನಿ ಬಿದೈತಿ ರೊಕ್ಕಾ ಕೊಡಸ್ರಿ ಅಂತ ಭಾಳ ಮಂದಿ ಮುಂದ ಹೇಳಿದ್ರೂ ಯಾರೂ ಕಿವಿಗಿ ಹಾಕೋವಾರ. ಪಂಚಾಯಿತಿಗಿ ಹೋಗಿ ಕೈ ಮುಗಿದ ಕೇಳಿದ್ರೂ ಮಾಡೋಣು ಅಂತ ಹೇಳಿ ಕಳಿಸಿ ಬಿಡ್ತಾರ. ನಾಕ ತಿಂಗಳಿಂದ ಮಸೋತ್ಯಾಗ ಮಲ್ಕೊಳ್ಯಾಕ ಹತ್ತೇವ. ಊರ ಚಾಕರಿ ಮಾಡೋ ನಮ್ಮಂಥಾವರಿಗೆ ಹಿಂಗ ಆಗೈತಿ.
– ನೂರಅಹ್ಮದ ನದಾಫ, ಸಂತ್ರಸ್ತ
-ಭೈರೋಬಾ ಕಾಂಬಳೆ