Advertisement

ಚೀನ ರಾಯಭಾರಿ ಭೇಟಿ : ಕೊನೆಗೂ ಒಪ್ಪಿಕೊಂಡ ರಾಹುಲ್‌ ಗಾಂಧಿ

07:42 PM Jul 10, 2017 | udayavani editorial |

ಹೊಸದಿಲ್ಲಿ : ಚೀನದ ರಾಯಭಾರಿ ಲೂವೋ ಝಾವೋಹುಯಿ ಅವರನ್ನು ತಾನು ಭೇಟಿಯಾದದ್ದು ನಿಜ ಎಂದು ಕೊನೆಗೂ ಒಪ್ಪಿಕೊಂಡಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು “ಗಂಭೀರ ವಿಷಯಗಳ ಬಗ್ಗೆ  ತಿಳಿದುಕೊಳ್ಳುವುದು ನನ್ನ  ಕೆಲಸ’ ಎಂದು ತನ್ನ ಈ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. 

Advertisement

ರಾಹುಲ್‌ ಗಾಂಧಿ ಚೀನೀ ರಾಯಭಾರಿಯನ್ನು ಭೇಟಿಯಾಗಿದ್ದಾರೆ ಎಂದು ಕೆಲವು ಟಿವಿ ವಾಹಿನಿಗಳು ಮಾಡಿದ್ದ ವರದಿಗಳನ್ನು ಕಾಂಗ್ರೆಸ್‌ ಪಕ್ಷ ಖಡಾ ಖಂಡಿತವಾಗಿ ನಿರಾಕರಿಸಿ ಇವೆಲ್ಲ ಕೇವಲ ಫೇಕ್‌ ಸುದ್ದಿಗಳು ಎಂದು ಹೇಳಿತ್ತು. ಆದರೆ ರಾಹುಲ್‌ ಗಾಂಧಿ ಚೀನೀ ರಾಯಭಾರಿಯನ್ನು ಭೇಟಿಯಾದ ಸಂಗತಿ ದೃಢ ಪಡುತ್ತಲೇ ಕಾಂಗ್ರೆಸ್‌ ಪಕ್ಷ ತನ್ನ ಧಾಟಿ ಬದಲಾಯಿಸಿತ್ತು. 

ಸಿಕ್ಕಿಂ ಗಡಿಯಲ್ಲಿನ ಡೋಕಲಾಂ ಪ್ರದೇಶದಲ್ಲಿ ಚೀನ ಮತ್ತು ಭಾರತ ಸೇನೆ ಕಳೆದ ಮೂರು ವಾರಗಳಿಂದ ಮುಖಾಮುಖೀಯಾಗಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಹೊಸದಿಲ್ಲಿಯಲ್ಲಿನ ಚೀನೀ ರಾಯಭಾರಿಯನ್ನು ಭೇಟಿಯಾದದ್ದು ವಿವಾದಕ್ಕೆ ಕಾರಣವಾಗಿತ್ತು. ರಾಹುಲ್‌ ಅವರು ತಮ್ಮ ಈ ಭೇಟಿಯ ವಿವರಗಳನ್ನು ಬಹಿರಂಗಪಡಿಸುವಂತೆ ಬಿಜೆಪಿ ಆಗ್ರಹಿಸಿತ್ತು. 

ರಾಹುಲ್‌ ಗಾಂಧಿ ಅವರು ಟ್ವಿಟರ್‌ನಲ್ಲಿ “ನಾನು ರಾಯಭಾರಿಯನ್ನು ಭೇಟಿಯಾದ ಬಗ್ಗೆ ಸರಕಾರಕ್ಕೆ ಏಕೆ ಅಷ್ಟೊಂದು ಕಳವಳ. ಗಂಭೀರ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ನನ್ನ ಕೆಲಸ. ನಾನು ಚೀನೀ ರಾಯಭಾರಿ ಮಾತ್ರವಲ್ಲದೆ ಭೂತಾನಿನ ರಾಯಭಾರಿ ಹಾಗೂ ಮಾಜಿ ನಾಸಾ ಮುಖ್ಯಸ್ಥರನ್ನೂ ಭೇಟಿಯಾಗಿದ್ದೇನೆ’ ಎಂದು ರಾಹುಲ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next