ಹೊಸದಿಲ್ಲಿ : 250 ಉಗ್ರರ ಹತ್ಯೆ ನಡೆದಿದೆ ಎನ್ನಲಾಗಿರುವ ಪಾಕಿಸ್ಥಾನದ ಬಾಲಾಕೋಟ್ ಜೈಶ್ ಉಗ್ರ ಶಿಬಿರಗಳ ಮೇಲಿನ ಐಎಎಫ್ ವಾಯು ದಾಳಿಗೆ ಇದೀಗ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಕೂಡ ಸಾಕ್ಷ್ಯ ಕೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಬಳಿಕ ಇದೀಗ ಐಎಎಫ್ ವಾಯು ದಾಳಿ ಮತ್ತು ಅದರಲ್ಲಿ 250ರಷ್ಟು ಜೈಶ್ ಉಗ್ರರು ಬಲಿಯಾಗಿರುವ ಬಗ್ಗೆ ಸಾಕ್ಷ್ಯ ಕೇಳಿರುವ ಕಪಿಲ್ ಸಿಬಲ್ ಇಂದು ಸೋಮವಾರ ಈ ರೀತಿ tweet ಮಾಡಿದ್ದಾರೆ :
”ಅಂತಾರಾಷ್ಟ್ರೀಯ ಮಾಧ್ಯಮಗಳಾದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಲಂಡನ್ ಮೂಲದ ಜೇನ್ ಇನ್‌ಫಾರ್ಮೇಶನ್ ಗ್ರೂಪ್, ಡೈಲಿ ಟೆಲಿಗ್ರಾಫ್, ದಿ ಗಾರ್ಡಿಯನ್ ಮತ್ತು ರಾಯ್‌ಟರ್ಸ್, ಪಾಕಿಸ್ಥಾನದ ಬಾಲಾಕೋಟ್‌ನಲ್ಲಿ ಉಗ್ರರು ಸತ್ತಿರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವರದಿ ಮಾಡಿವೆ. ಹಾಗಿರುವಾಗ ಈಗ ಪ್ರಧಾನಿ ಮೋದಿ ಜೀ ಅವರೇ ಇದಕ್ಕೆ ಉತ್ತರ ಕೊಡಬೇಕು” ಎಂದು ಸಿಬಲ್ ಒತ್ತಾಯಿಸಿದ್ದಾರೆ.
”ಪ್ರಧಾನಿ ಮೋದಿ ಅವರು ಇಂದು ಸೋಮವಾರ ಮಾಡಿರುವ ಟ್ವೀಟ್ ನಲ್ಲಿ, ನಮ್ಮ ಸೇನಾ ಪಡೆ ಏನು ಹೇಳಿದೆಯೋ ನಾವದನ್ನು ಸಹಜವಾಗಿಯೇ ನಂಬಬೇಕು ಮತ್ತು ನಮ್ಮ ಸೇನಾ ಪಡೆಗಳ ಬಗ್ಗೆ ಹೆಮ್ಮೆ ಪಡಬೇಕು” ಎಂದು ಹೇಳಿದ್ದಾರೆ.
“ಹಾಗಿದ್ದರೂ ಕೆಲವರು ಯಾಕೆ ನಮ್ಮ ಸೇನಾ ಪಡೆಯನ್ನು ಪ್ರಶ್ನಿಸುತ್ತಾರೆ ಎಂಬುದೇ ನನಗೆ ಅರ್ಥವಾಗುವುದಿಲ್ಲ” ಎಂದು ಮೋದಿ ತಮ್ಮ ಟ್ವೀಟ್ ನಲ್ಲಿ ಉದ್ಗರಿಸಿದ್ದಾರೆ.