ಬೆಂಗಳೂರು: ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ‘ಚಂದ್ರಯಾನ-2’ ಯೋಜನೆಯ ಮೂಲಕ ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸುವಲ್ಲಿ ವಿಫಲವಾಗಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), 2020ರಲ್ಲಿ ಆ ನಿಟ್ಟಿನಲ್ಲಿ ಮತ್ತೂಂದು ಪ್ರಯತ್ನ ಮಾಡಲು ನಿರ್ಧರಿಸಿದೆ. ಅದಕ್ಕೆ ‘ಚಂದ್ರಯಾನ-3’ ಎಂದು ಹೆಸರಿಡಲಾಗಿದ್ದು, 2020ರ ನವೆಂಬರ್ ವೇಳೆಗೆ, ಚಂದ್ರನ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಇಸ್ರೋ ವಿಜ್ಞಾನಿಗಳು ತಮ್ಮ ಕೆಲಸ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸತೇನಿದೆ?: ‘ಚಂದ್ರಯಾನ-2’ರಲ್ಲಿ, ಒಂದು ಆರ್ಬಿಟರ್, ಒಂದು ಲ್ಯಾಂಡರ್ (ವಿಕ್ರಮ್) ಹಾಗೂ ಒಂದು ರೋವರ್ ಅನ್ನು ಚಂದ್ರನ ಅಧ್ಯಯನಕ್ಕೆ ಕಳುಹಿಸಲಾಗಿತ್ತು. ಅದರಲ್ಲಿನ ಆರ್ಬಿಟರ್ ಈಗಲೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ, ‘ಚಂದ್ರಯಾನ-3’ರಲ್ಲಿ ಕೇವಲ ಲ್ಯಾಂಡರ್ ಹಾಗೂ ರೋವರ್‌ಗಳನ್ನು ಮಾತ್ರವೇ ಕಳುಹಿಸಲು ತೀರ್ಮಾನಿಸಲಾಗಿದೆ.
ತಜ್ಞರ ಸಮಿತಿಗಳು ರಚನೆ: ‘ಚಂದ್ರಯಾನ-3’ ಯೋಜನೆಯ ಮೇಲುಸ್ತುವಾರಿಗಾಗಿ ಹೊಸತೊಂದು ತಜ್ಞರುಳ್ಳ ಮುಖ್ಯ ಸಮಿತಿಯನ್ನು ರಚಿಸಲಾಗಿದೆ. ಅದರಡಿಯಲ್ಲಿ, ನಾಲ್ಕು ಉನ್ನತ ಮಟ್ಟದ ಉಪ ಸಮಿತಿಗಳನ್ನು ರಚಿಸಲಾಗಿದೆ. ಈ ಉಪ ಸಮಿತಿಗಳು, ಪ್ರೊಪಲ್ಷನ್, ಸೆನ್ಸರ್‌ಗಳು, ಸಮಗ್ರ ತಂತ್ರಜ್ಞಾನ, ರಾಕೆಟ್ ಸಾಗುವ ದಿಕ್ಕು ಸೇರಿದಂತೆ ಹಲವಾರು ವಿಭಾಗಗಳಿಗೆ ಸಂಬಂಧಿಸಿದಂತೆ ವರದಿ ನೀಡುತ್ತವೆ. ಆ ವರದಿಗಳಿಗೆ ಮುಖ್ಯ ಸಮಿತಿಯಲ್ಲಿನ ತಜ್ಞರು ಸೂಕ್ತ ಸಲಹೆ ಅಥವಾ ಮಾರ್ಗದರ್ಶನ ನೀಡುತ್ತಾರೆ. ಇದೇ ಮಂಗಳವಾರ ಮೇಲುಸ್ತುವಾರಿ ಸಮಿತಿಯ ಸದಸ್ಯರು, ತನ್ನ ಅಧೀನದಲ್ಲಿರುವ ಉಪ ಸಮಿತಿಗಳ ಸದಸ್ಯರ ಜತೆಗೆ ಮಾತುಕತೆ ನಡೆಸಿದ್ದಾರೆ.
ಲ್ಯಾಂಡರ್ ಬಗ್ಗೆ ಮತ್ತಷ್ಟು ನಿಖರತೆ: ಇಸ್ರೋದ ವಿಜ್ಞಾನಿಗಳು ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಬಾರಿ ರಚಿಸಲಾಗಿದ್ದ ಲ್ಯಾಂಡರ್‌ನ ತಂತ್ರಜ್ಞಾನಕ್ಕಿಂತ ಹೆಚ್ಚು ಕರಾರುವಾಕ್ ಆದ ತಂತ್ರಜ್ಞಾನವನ್ನು ಸಿದ್ಧಪಡಿಸಲು ಇಸ್ರೋ ಪ್ರಯತ್ನಿಸುತ್ತಿದೆ. ಚಂದ್ರನ ಮೇಲೆ ಲ್ಯಾಂಡರ್ ಎಲ್ಲಿ ಇಳಿಯಬೇಕು, ಚಂದ್ರನತ್ತ ಯಾವ ದಿಕ್ಕಿನಿಂದ ಚಲಿಸಬೇಕು ಮುಂತಾದ ವಿಷಯಗಳಲ್ಲಿ ಹಿಂದಿಗಿಂತಲೂ ನಿಖರವಾದ ಸಾಧನೆ ತೋರಲು ಇಸ್ರೋ ತಂಡ ಸಜ್ಜಾಗುತ್ತಿದೆ. ಲ್ಯಾಂಡರ್‌ನ ಕಾಲುಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಯೋಜನೆ ಮಾಡಲಾಗಿದೆ. ಇದರಿಂದ, ಅತಿ ವೇಗವಾಗಿ ಸಾಗಿಬಂದು ಚಂದ್ರನಲ್ಲಿಗೆ ಇಳಿದರೂ, ಅದರ ಕಾಲಿಗೆ ಯಾವುದೇ ಧಕ್ಕೆಯಾಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಮಾದರಿಯ ಲ್ಯಾಂಡರ್?: ಚಂದ್ರಯಾನ-3ರಲ್ಲಿ ಈ ಬಾರಿ ಮಾದರಿಯ ಹೊಸ ಲ್ಯಾಂಡರ್ ಹಾಗೂ ರೋವರ್‌ಗಳನ್ನು ನಿರ್ಮಿಸಲು ಇಸ್ರೋ ಉದ್ದೇಶಿಸಿದೆ. ಹೊಸ ವಿನ್ಯಾಸದ ಲ್ಯಾಂಡರ್, ರೋವರ್‌ಗಳನ್ನು ರೂಪಿಸಲು ತೀರ್ಮಾನಿಸಲಾಗಿದೆ. ಇನ್ನು, ಲ್ಯಾಂಡರ್‌ನಲ್ಲಿ ಅಳವಡಿಸಬಹುದಾದ ಪರಿಕರಗಳು ಎಷ್ಟಿರಬೇಕೆಂಬುದರ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.