ಕೊರಟಗೆರೆ: ಪ್ರತಿದಿನ ದಿನಪತ್ರಿಕೆ ಹಾಕುವ ಗ್ರಂಥಾಲಯ ಕಟ್ಟಡದ ಕಿಟಕಿಯಲ್ಲಿ ತೆರೆದಿರುವ ಕಿಂಡಿಯೊಳಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಪರಿಣಾಮ ಗ್ರಂಥಾಲಯದ ಕೊಠಡಿಯಲ್ಲಿದ್ದ ದಿನ ಪತ್ರಿಕೆಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ಸಂಭವಿಸಿದೆ.
ಪಟ್ಟಣದ ಅಂಬೇಡ್ಕರ್ ಭವನದ ಕಟ್ಟಡದಲ್ಲಿರುವ ತಾಲೂಕು ಗ್ರಂಥಾಲಯ ಶಾಖೆಯಲ್ಲಿ ಕಿಡಿಗೇಡಿಗಳು ಸಿಗರೆಟ್ ಸೇದಿದ ನಂತರ ಬೆಂಕಿಯ ಕಿಡಿ ಕಿಟಕಿಯ ಕಿಂಡಿಯೊಳಗೆ ಹಾಕಿದ್ದಾರೆ. ಬೆಂಕಿಯ ಕಿಡಿಯಿಂದ ಗ್ರಂಥಾಲಯದ ಚಿಕ್ಕ ಕೊಠಡಿಯಲ್ಲಿದ್ದ ದಿನ ಪತ್ರಿಕೆಗಳು ಮಾತ್ರ ಸುಟ್ಟುಹೋಗಿದ್ದು, ಸಾವಿರಾರು ಪುಸ್ತಕಗಳು ಉಳಿದುಕೊಂಡಿವೆ.
ಪಟ್ಟಣದ ಸಾರ್ವಜನಿಕ ಗ್ರಂಥಾ ಲಯದಲ್ಲಿ ಒಟ್ಟು 4 ಲಕ್ಷಕ್ಕೂ ಅಧಿಕ ಮೌಲ್ಯದ 35 ಸಾವಿರಕ್ಕೂ ಹೆಚ್ಚು ಮೌಲ್ಯದ ಕಥೆ, ಕಾದಂಬರಿ, ಸಾಹಿತ್ಯ, ಶೈಕ್ಷಣಿಕ ಪುಸ್ತಕ, ಸಾಮಾನ್ಯ ಜ್ಞಾನದ ಪುಸ್ತಕಗಳಿವೆ. ಕೊಠಡಿಯಲ್ಲಿ ಬೆಂಕಿ ಹಾರಿಹೋಗಿ ರುವ ಪರಿಣಾಮ ದೊಡ್ಡ ಕೊಠಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪುಸ್ತಕಗಳು ಬೆಂಕಿಯಿಂದ ಪಾರಾಗಿರುವ ಘಟನೆ ನಡೆದಿದೆ.
ಬೆಳಕಿನ ವ್ಯವಸ್ಥೆ ಮರೀಚಿಕೆ: ಸಮಾಜ ಕಲ್ಯಾಣ ಇಲಾಖೆಯ ಸಮೀಪದ ಅಂಬೇಡ್ಕರ್ ಭವನ ದಲ್ಲಿರುವ ತಾಲೂಕು ಗ್ರಂಥಾಲಯ ಶಾಖೆ ಮುಂಭಾಗ ಬೆಳಕಿನ ವ್ಯವಸ್ಥೆ ಮರೀಚಿಕೆಯಾಗಿದೆ. ರಾತ್ರಿ ಪಾಳೆಯದಲ್ಲಿ ಸಂಜೆ 7 ಗಂಟೆಯಿಂದ ಮಧ್ಯರಾತ್ರಿ 12ಗಂಟೆವರೆಗೂ ಮದ‌್ಯವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಕುಡಿದ ಖಾಲಿ ಬಾಟಲುಗಳನ್ನು ಕುಡಿದ ಆಮಲಿನಲ್ಲಿ ಗ್ರಂಥಾಲಯದ ಮುಂದೆಯೆ ಒಡೆದು ಹಾಕಿ ಹೋಗುತ್ತಾರೆ.
ಗ್ರಂಥಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ಬಳಿ ರಾತ್ರಿವೇಳೆ ಕುಡುಕರ ಹಾವಳಿ ತಪ್ಪಿಸಲು ಪಪಂ ಅಧಿಕಾರಿ ವರ್ಗ ತಕ್ಷಣ ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ. ಸರ್ಕಾರಿ ಕಚೇರಿಯ ಬಳಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆಗಳು ಮದ್ಯವ್ಯಸನಿಗಳು ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಓದುಗರು ಹಾಗೂ ಸ್ಥಳೀಯ ನಾಗರಿಕರು ಆಗ್ರಹ ಮಾಡಿದ್ದಾರೆ.