ನವದೆಹಲಿ: ಎಲ್ಲಾ ಸಂಸದರು ಹಾಗೂ ಶಾಸಕರುಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಗಾ ಇರಿಸಲು ನಿರ್ದೇಶನ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಪಿಐಎಲ್ ಸಲ್ಲಿಸಿದ್ದ ಕಕ್ಷಿದಾರನಿಗೆ ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿ, ದಂಡ ವಿಧಿಸದೇ ಕಳುಹಿಸಿರುವ ಘಟನೆ ಶುಕ್ರವಾರ (ಮಾರ್ಚ್ 01) ನಡೆದಿದೆ.
ಇದನ್ನೂ ಓದಿ:Bengaluru;ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವಾಗಿದ್ದು ಬಾಂಬ್: 9 ಮಂದಿ ಆಸ್ಪತ್ರೆಯಲ್ಲಿ
ಇನ್ಮುಂದೆ ಇಂತಹ ಮನವಿಯ ಪಿಐಎಲ್ ಸಲ್ಲಿಸಬೇಡಿ ಎಂದು ಅರ್ಜಿದಾರರಿಗೆ ಎಚ್ಚರಿಕೆ ನೀಡಿರುವ ಸುಪ್ರೀಂಕೋರ್ಟ್ ಸಿಜೆಐ, ಮನವಿಯನ್ನು ತಿರಸ್ಕರಿಸಿ, ನಾವು ಸಂಸದರು, ಶಾಸಕರ ಹೆಗಲ ಮೇಲೆ ಮೈಕ್ರೋಚಿಪ್ ಅಳವಡಿಸಬೇಕೇ? ಎಂದು ಪ್ರಶ್ನಿಸಿದರು.
ಸಂಸದರು, ಶಾಸಕರನ್ನು ಡಿಜಿಟಲಿ ಹೇಗೆ ಮಾನಿಟರ್ ಮಾಡಲು ಸಾಧ್ಯ? ಸಂಸದರು, ಶಾಸಕರುಗಳಿಗೂ ಖಾಸಗಿತನದ ಹಕ್ಕಿದೆ, ಈ ವಿಚಾರದಲ್ಲಿ ನಾವು ಹೇಗೆ ಮಧ್ಯಪ್ರವೇಶಿಸಲು ಸಾಧ್ಯ. ಇನ್ಮುಂದೆ ಇಂತಹ ಅರ್ಜಿಯನ್ನು ಸಲ್ಲಿಸಬೇಡಿ ಎಂದು ಅರ್ಜಿದಾರ ಸುರೀಂದರ್ ಕುಂದ್ರಾಗೆ ಸಿಜೆಐ ಚಂದ್ರಚೂಡ್ ಎಚ್ಚರಿಕೆ ನೀಡಿದ್ದರು.
ಸಾರ್ವಜನಿಕ ಸಮಯವನ್ನು ವ್ಯರ್ಥ ಮಾಡಿದ್ರೆ ಸುಪ್ರೀಂಕೋರ್ಟ್ 5 ಲಕ್ಷ ದಂಡವನ್ನು ವಿಧಿಸುತ್ತದೆ ಎಂದು ಪಿಐಎಲ್ ವಿಚಾರಣೆಗೂ ಮುನ್ನ ಸಿಜೆಐ ಎಚ್ಚರಿಕೆ ನೀಡಿದ್ದರು. ಬಳಿಕ ನಿಮ್ಮ ಮನವಿಯ ಬಗ್ಗೆ 15 ನಿಮಿಷದೊಳಗೆ ವಿವರಣೆ ನೀಡಬೇಕು ಎಂದು ಕುಂದ್ರಾಗೆ ತಾಕೀತು ಮಾಡಿದ್ದರು.
ಕುಂದ್ರಾ ವಿವರಣೆ ನೀಡುವುದನ್ನು 15 ನಿಮಿಷಕ್ಕಿಂತಲೂ ಹೆಚ್ಚು ಅವಧಿ ತೆಗೆದುಕೊಳ್ಳುವ ಮೊದಲೇ ಸಿಜೆಐ ನಿಲ್ಲಿಸುವಂತೆ ಕೈಸನ್ನೆ ಮಾಡಿ, ಅರ್ಜಿಯನ್ನು ವಜಾಗೊಳಿಸಿ, ಕೋರ್ಟ್ ಸಮಯ ವ್ಯರ್ಥಗೊಳಿಸಿದ್ದಕ್ಕೆ ದಂಡ ವಿಧಿಸದೇ ಎಚ್ಚರಿಕೆ ನೀಡುತ್ತಿರುವುದಾಗಿ ಸಿಜೆಐ ತಿಳಿಸಿದರು.