ವಾಷಿಂಗ್ಟನ್: ಪ್ರೀತಿಗೆ ಸಾವಿಲ್ಲ ಎಂಬ ಮಾತನ್ನು ಈ ಜೋಡಿ ಸಾಬೀತುಪಡಿಸಿದೆ. 2021ರಲ್ಲಿ ಅತೀಯಾದ ವೇಗದಿಂದಾಗಿ ಬೈಕ್ 50 ಅಡಿ ಆಳದ ಕಂದಕಕ್ಕೆ ಹೋಗಿ ಬಿದ್ದ ಪರಿಣಾಮ ಪತಿ, ಪತ್ನಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಪತಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಕೂಡಲೇ ದಂಪತಿಯನ್ನು ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತಿಯ ಶ್ವಾಸಕೋಶ, ಮೂಳೆಗಳು ಮುರಿದು ಹೋಗಿ, ಚಿಂತಾಜನಕ ಸ್ಥಿತಿಯಲ್ಲಿದ್ದ…ಈ ಘಟನೆ ನಡೆದಿದ್ದು ಅಮೆರಿಕದಲ್ಲಿ.
ಅಪಘಾತದಿಂದ ಪತಿ ಸ್ಮರಣ ಶಕ್ತಿ ಕಳೆದುಕೊಂಡಿದ್ದ!
ವರ್ಜಿನಿಯಾದ ಕ್ರಿಸ್ಟೈ ಮತ್ತು ಆ್ಯಂಡ್ರ್ಯೂ ಮೆಕೆಂಝೈ ಬೈಕ್ ಅಪಘಾತದಲ್ಲಿ ಸಾವಿನ ಕದ ತಟ್ಟಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನಗಳ ಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿದ್ದ ಆ್ಯಂಡ್ರ್ಯೂಗೆ ಪ್ರಜ್ಞೆ ಮರುಕಳಿಸಿತ್ತು. ಆದರೆ ಆತನಿಗೆ 29 ವರ್ಷಗಳ ದಾಂಪತ್ಯದ ನೆನಪು ಹೊರಟು ಹೋಗಿತ್ತು.! ದಿಢೀರ್ ಪ್ರಜ್ಞೆ ಬಂದ ಆ್ಯಂಡ್ರ್ಯೂಗೆ 1993ನೇ ಇಸವಿಯಷ್ಟು ಹಿಂದಿನ ನೆನಪು ಮಾತ್ರ ಉಳಿದುಕೊಂಡಿತ್ತು.
ಎಬಿಸಿ-7 ವರದಿಯ ಪ್ರಕಾರ, ಆ್ಯಂಡ್ರ್ಯೂ ಅವರು ತನ್ನ ಇಬ್ಬರು ಪುತ್ರಿಯರಾದ ಲೋರೆಲೈ ಮೆಂಟೆಝೆರ್ ಮತ್ತು ಅಮಂಡಾ ಮೆಕೆಂಝೈಯನ್ನೂ ಗುರುತಿಸಲು ಸಾಧ್ಯವಾಗಿಲ್ಲ ಎಂದು ಕ್ರಿಸ್ಟೈ ನೆನಪಿಸಿಕೊಂಡಿರುವುದಾಗಿ ತಿಳಿಸಿದೆ.
Related Articles
ಆಸ್ಪತ್ರೆಯಲ್ಲಿ ಆ್ಯಂಡ್ರ್ಯೂ ಅವರಿಗೆ ಪ್ರಜ್ಞೆ ಬಂದಾಗ ನನ್ನ ಪತ್ನಿ ಎಲ್ಲಿ, ನನ್ನ ಪತ್ನಿ ಎಲ್ಲಿ? ಎಂದು ಪ್ರಶ್ನಿಸತೊಡಗಿದ್ದರು. ಅವರು ತಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಭಾವಿಸಿಕೊಂಡಿದ್ದರು ಎಂಬುದಾಗಿ ಪುತ್ರಿ ಲೋರೆಲೈ ತಿಳಿಸಿದ್ದಾರೆ.
“ನನಗೆ ನೆನಪಿರುವ ಮೊದಲ ವಿಷಯವೆನೆಂದರೆ ವ್ಹೀಲ್ ಚೇರ್ ನಲ್ಲಿರುವ ಕ್ರಿಸ್ಟೈ, ನನ್ನ ಬಗ್ಗೆ ಕಾಳಜಿ ವಹಿಸಲು ಶ್ರಮಿಸಿರುವುದು ಎಂಬುದಾಗಿ ಆ್ಯಂಡ್ರ್ಯೂ ಹೇಳಿದ್ದರು. ಆದರೆ ಆಕೆಯೇ ತನ್ನ ಪತ್ನಿ ಎಂಬ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡುಬಿಟ್ಟಿದ್ದರು!
ಏತನ್ಮಧ್ಯೆ ಆ್ಯಂಡ್ರ್ಯೂ ಅವರ ನೆನಪಿನ ಶಕ್ತಿ ಮರಳಿ ಬರುವ ಬಗ್ಗೆ ವೈದ್ಯರು ಕೂಡಾ ಖಚಿತವಾಗಿ ಹೇಳದಿದ್ದಾಗ ಪತ್ನಿ ಮತ್ತು ಮಕ್ಕಳಿಗೆ ಆಘಾತವಾಗಿತ್ತು. ಆದರೆ ಪತ್ನಿ ಕ್ರಿಸ್ಟೈ ಮಾತ್ರ ತನ್ನ ಪತಿಯನ್ನು ತನ್ನ ಕೋಣೆಯೊಳಗೆ ಇರಲು ಅವಕಾಶ ಮಾಡಿಕೊಡಿ, ಇದರಿಂದ ಅವರ ಜ್ಞಾಪಕ ಶಕ್ತಿ ಮರಳಲು ನೆರವಾಗಬಹುದು ಎಂದು ವೈದ್ಯರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಹೀಗೆ ಆಸ್ಪತ್ರೆಯ ಒಂದೇ ರೂಮಿನಲ್ಲಿ ಕ್ರಿಸ್ಟೈ ಮತ್ತು ಆ್ಯಂಡ್ರ್ಯೂ ಜೊತೆಯಾಗಿದ್ದಾಗ, ಕ್ರಿಸ್ಟೈ ಬಗ್ಗೆ ವಿಚಾರಿಸತೊಡಗಿದ್ದರು. ಸುಮಾರು 11 ದಿನಗಳ ನಂತರ ದಂಪತಿ ನಡೆಯಲು ಆರಂಭಿಸಿದ್ದರು. ನಂತರ ಆ್ಯಂಡ್ರ್ಯೂ ಕ್ರಿಸ್ಟೈ ಬಳಿ ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದರು. ಹೌದು ನನಗೆ ಅಂದು ತುಂಬಾ ಖುಷಿಯಾಗಿತ್ತು. ಯಾಕೆಂದರೆ ನಾವು ಅದಾಗಲೇ ವಿವಾಹವಾಗಿ 37 ವರ್ಷಗಳನ್ನು ಕಳೆದಿದ್ದೇವು. ಆದರೆ ನನ್ನ ಪತಿ ಜ್ಞಾಪಕ ಶಕ್ತಿ ಕಳೆದುಕೊಂಡಿದ್ದರಿಂದ, 2ನೇ ಬಾರಿ ವಿವಾಹದ ಪ್ರಸ್ತಾಪ ಇಟ್ಟಾಗ ಆಶ್ಚರ್ಯವಾಗಲಿಲ್ಲ. ಯಾಕೆಂದರೆ ಸಾವಿನ ಕದ ತಟ್ಟಿ ಬಂದ ನಮ್ಮಿಬ್ಬರನ್ನೂ ಮತ್ತೆ ಒಂದಾಗಿಸಿದೆ ಎಂದು ಕ್ರಿಸ್ಟೈ ಸಂತಸವನ್ನು ಹಂಚಿಕೊಂಡಿರುವುದಾಗಿ ವರದಿ ತಿಳಿಸಿದೆ.