ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಕಟ್ಟೆಯೊಡೆಯುವ ಲಕ್ಷಣಗಳು ಕಾಣಿಸುತ್ತಿವೆ.
ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ, ಸಂಪುಟ ವಿಸ್ತರಣೆ ಮಾಡಿ ಪಕ್ಷೇತರರಿಗೆ ಅವಕಾಶ ನೀಡುತ್ತಿರುವ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಫಲಿತಾಂಶಕ್ಕೂ ಮೊದಲು ಶಿವಾಜಿನಗರ ಶಾಸಕ ರೋಷನ್ ಬೇಗ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಿದ್ದರು. ಈಗ ರಾಮಲಿಂಗಾರೆಡ್ಡಿ, ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
“ಸರ್ಕಾರ ಉಳಿಸಿಕೊಳ್ಳಲು ಪಕ್ಷೇತರರಿಗೆ ಸಚಿವ ಸ್ಥಾನ ನೀಡುತ್ತಿದ್ದೀರಾ? ಅವರೇನು ನಿಮ್ಮ ಜತೆಗೆ ಶಾಶ್ವತವಾಗಿ ಇರುತ್ತಾರಾ? ಯಾರಾದರೂ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದರೆ ಅವರನ್ನು ಕರೆದು ಸಚಿವರನ್ನಾಗಿ ಮಾಡುತ್ತಿರಿ, ಪಕ್ಷದಲ್ಲಿ ನಿಷ್ಠೆಯಿಂದ ಇರುವವರಿಗೆ ಯಾವುದೇ ಬೆಲೆ ಇಲ್ವಾ?’ ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಾತಿ ಲೆಕ್ಕಾಚಾರದಲ್ಲಿ ಅಧಿಕಾರ ಹಂಚಿಕೆ ಮಾಡುತ್ತಿರಾ ರೆಡ್ಡಿ ಸಮುದಾಯದಲ್ಲಿ ಒಬ್ಬರಿಗೆ ಕೊಟ್ಟಿದೆ ಎಂದು ನನ್ನನ್ನು ಹೊರಗೆ ಇಡುತ್ತೀರಾ. ಬ್ರಾಹ್ಮಣ ಸಮುದಾಯದಲ್ಲಿ ಕೆಪಿಸಿಸಿ ಅಧ್ಯಕ್ಷರು, ಕಂದಾಯ ಸಚಿವರು, ವಿಧಾನಸಭಾಧ್ಯಕ್ಷರು ಇದ್ದರೂ ಯಾರೂ ಪ್ರಶ್ನೆ ಮಾಡುವುದಿಲ್ಲ.
ಹಿರಿಯರಿಗೆ ಅವಕಾಶ ಇಲ್ಲ ಎಂದು ಹೇಳಿ, ಜಾರ್ಜ್, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ ಅವರಿಗೆ ಅವಕಾಶ ನೀಡುತ್ತೀರ. ಇದ್ಯಾವ ರೀತಿಯ ಸಮಾಜಿಕ ನ್ಯಾಯ ಎಂದು ಪ್ರಶ್ನಿದ್ದಾರೆ ಎನ್ನಲಾಗಿದೆ.
ನಾನು ಸಚಿವ ಸ್ಥಾನಕ್ಕಾಗಿ ಯಾವ ನಾಯಕರ ಮನೆ ಬಾಗಿಲಿಗೂ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷವನ್ನೂ ತೊರೆಯುವುದಿಲ್ಲ. ಅಧಿಕಾರದಲ್ಲಿವವರು ಪಕ್ಷಕ್ಕಾಗಿ ದುಡಿದವರಿಗೆ ಪಕ್ಷದಲ್ಲಿ ಗೌರವ ಇಲ್ಲದಿದ್ದರೆ, ರಾಜಕೀಯದಲ್ಲಿ ಇದ್ದು ಪ್ರಯೋಜನ ಏನು ಎಂದು ಖಾರವಾಗಿಯೇ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.