ಕೋಲ್ಕತ್ತಾ: ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A.R.Rahman) ತಮ್ಮ 29 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಈ ಸುದ್ದಿ ಚರ್ಚೆಯಲ್ಲಿರುವಾಗಲೇ ಮತ್ತೊಂದು ವಿಚ್ಚೇದನ ಸುದ್ದಿ ಹೊರಬಿದ್ದಿದೆ.
ಎ.ಆರ್.ರೆಹಮಾನ್ ತಂಡದಲ್ಲಿ ಸದಸ್ಯೆ ಆಗಿರುವ ಗಿಟಾರ್ ವಾದಕಿ (Bass Guitar Player) ಮೋಹಿನಿ ಡೇ (Mohini Dey) ಅವರು ತಮ್ಮ ಪತಿ, ಸಂಗೀತ ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ನಿಂದ (Mark Hartsuch) ದೂರವಾಗಿರುವುದಾಗಿ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೋಹಿನಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪರಸ್ಪರ ಒಪ್ಪಿಗೆಯಿಂದಲೇ ನಾವು ಬೇರೆ ಆಗುತ್ತಿದ್ದೇವೆ. ನಾವು ಉತ್ತಮ ಸ್ನೇಹಿತರಾಗಿಯೇ ಇರುತ್ತೇವೆ. ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಹುಡುಕಲು ಬಯಸುತ್ತೇವೆ. ನಾವು ಬೇರೆ ಆಗಿದ್ದರೂ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಜತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಮೋಹಿನಿ ಹೇಳಿದ್ದಾರೆ.
ಮೋಹಿನಿ ಕೋಲ್ಕತ್ತಾ ಮೂಲದ ಬೇಸ್ ಗಿಟಾರ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾ ಅವರ ವಿಂಡ್ ಆಫ್ ಚೇಂಜ್‌ನಲ್ಲಿ ಮೂಲಕ ಜನಪ್ರಿಯರಾಗಿದ್ದಾರೆ. ಅವರು ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ರೆಹಮಾನ್ ಅವರ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 2023 ರಲ್ಲಿ ಅವರ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ.
ಎ.ಆರ್.ರೆಹಮಾನ್ ಅವರ ದಾಂಪತ್ಯ ಜೀವನದ ಅಂತ್ಯದ ಬಳಿಕ ಮೋಹಿನಿ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.