Advertisement

ದೇವರನಾಡಲ್ಲಿ 94 ವರ್ಷಗಳ ಬಳಿಕ ಮರುಕಳಿಸಿದ ವಿಕೋಪ

06:00 AM Aug 14, 2018 | Team Udayavani |

ತಿರುವನಂತಪುರಂ: ಕಳೆದೈದು ದಿನಗಳಿಂದ ಕೇರಳದಲ್ಲಿ ಸಂಭವಿಸುತ್ತಿರುವ ಮಳೆಯ ಆರ್ಭಟ, ಆ ರಾಜ್ಯದಲ್ಲಿ 94 ವರ್ಷಗಳ ಹಿಂದೆ 7 ದಿನ ಸುರಿದಿದ್ದ ಮಹಾಮಳೆ ನಂತರದ ಮತ್ತೂಂದು ವಿಧ್ವಂಸಕಾರಿ ವರ್ಷಧಾರೆ ಎಂದು ಹೇಳಲಾಗಿದೆ. ಅಂದರೆ, 1924ರ ಬಳಿಕ ಭೀಕರ ಪ್ರಾಕೃತಿಕ ವಿಕೋಪಕ್ಕೆ ದೇವರ ನಾಡು ಸಾಕ್ಷಿಯಾದಂತಾಗಿದೆ. ಇದೇ ವೇಳೆ, ಸೋಮವಾರವೂ ಕೇರಳದಾದ್ಯಂತ ವರುಣ ಅಬ್ಬರಿಸಿದ್ದು, ಬುಧವಾರದವರೆಗೂ ಮಳೆಯ ಆರ್ಭಟ ಹೀಗೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ಜನತೆಯಲ್ಲಿ ಮತ್ತಷ್ಟು ಆತಂಕ ಹುಟ್ಟುಹಾಕಿದೆ. 

Advertisement

ರಸ್ತೆಗಳಿಗೆ ಭಾರೀ ಹಾನಿ: ಒಂದು ಅಂದಾಜಿನ ಪ್ರಕಾರ, 20,000 ಮನೆಗಳು ಹಾಗೂ 10 ಸಾವಿರ ಕಿ.ಮೀ.ಗಳಷ್ಟು ರಸ್ತೆ ಗಳಿಗೆ ಹಾನಿಯಾಗಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಿಗೆ ಹೆಚ್ಚಿನ ಹಾನಿಯುಂಟಾಗಿದ್ದು, ಸರಕಾರದಿಂದ ರಸ್ತೆ ರಿಪೇರಿಗೆ ವಿಶೇಷ ಪ್ಯಾಕೇಜ್‌ ಬಂದ ಕೂಡಲೇ ದುರಸ್ತಿ ಕಾರ್ಯ ಆರಂಭಿ ಸುತ್ತೇವೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಜೀವನ್‌ ಬಾಬು ತಿಳಿಸಿದ್ದಾರೆ. ಮಳೆಯಿಂದಾಗಿ 5 ದಿನದಲ್ಲಿ 39 ಜನರು ಸಾವನ್ನ ಪ್ಪಿದ್ದು, ಪ್ರಸಕ್ತ ಮುಂಗಾರಿನಲ್ಲಿ ಮೃತರ ಸಂಖ್ಯೆ 187ಕ್ಕೇರಿದೆ.

ತಾತ್ಕಾಲಿಕ ಕ್ಯಾಂಪ್‌: 27 ಅಣೆಕಟ್ಟುಗಳಲ್ಲಿ ನೀರು ಗರಿಷ್ಠ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಆ ಅಣೆಕಟ್ಟುಗಳ ಎಲ್ಲಾ ಕ್ರೆಸ್ಟ್‌ ಗೇಟ್‌ಗಳನ್ನು ತೆರೆದು ಅಪಾರ ಪ್ರಮಾಣದ ನೀರು ನದಿಗೆ ಹರಿಯಬಿಡಲಾಗುತ್ತಿದೆ. ಹೀಗಾಗಿ, ತ್ರಿಶೂರ್‌, ಎರ್ನಾಕುಲಂ, ಅಳಪ್ಪುಳ, ವಯನಾಡ್‌, ಕಲ್ಲಿಕೋಟೆ, ಇಡುಕ್ಕಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಈ ಜಿಲ್ಲೆಗಳು ಸೇರಿದಂತೆ ಇತರೆಡೆ ನಿರ್ಗತಿಕರಿಗಾಗಿ ಸುಮಾರು 320 ತಾತ್ಕಾಲಿಕ ಪರಿಹಾರ ಕ್ಯಾಂಪ್‌ಗ್ಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಸುಮಾರು 60 ಸಾವಿರ ನಿರ್ಗತಿಕರು ಉಳಿದುಕೊಂಡಿದ್ದಾರೆ.

ಪರಿಹಾರ ರಾಜಕೀಯ: ಈ ನಡುವೆ, ಕೇಂದ್ರ ಸರಕಾರ ನೀಡಿರುವ ಪರಿಹಾರ ಕುರಿತು ರಾಜಕೀಯ ಆರಂಭವಾಗಿದೆ. 100 ಕೋಟಿ ರೂ. ಪರಿಹಾರ ಏನಕ್ಕೂ ಸಾಲದು ಎಂದು ಕೇರಳ ವಿತ್ತ ಸಚಿವ ಥಾಮಸ್‌ ಐಸಾಕ್‌ ಹೇಳಿದ್ದು, ಇದೊಂದು ರಾಜಕೀಯ ಹೇಳಿಕೆ ಎಂದು ಕೇಂದ್ರ ಸಚಿವ ಕೆ.ಜೆ. ಅಲ್ಫೋನ್ಸ್‌ ಆರೋಪಿಸಿದ್ದಾರೆ. ಜತೆಗೆ, ಥಾಮಸ್‌ ಅವರು ಇನ್ನೂ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿಲ್ಲ ಎಂದು ದೂರಿದ್ದಾರೆ.

ಹಿಮಾಚಲದಲ್ಲಿ 18 ಸಾವು  
ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಮಳೆಯ ರುದ್ರನರ್ತನ ಆವರಿಸಿದೆ. ಹಿಮಾಚಲ ದಲ್ಲಿ ಅಗಾಧ ಮಳೆಯ ಪರಿಣಾಮ, 18 ಮಂದಿ ಸಾವಿಗೀಡಾಗಿದ್ದಾರೆ. ಇದಲ್ಲದೆ, ಶಿಮ್ಲಾದ ಬುಡಕಟ್ಟು ಜನಾಂಗಗಳು ಹೆಚ್ಚಾಗಿ ವಾಸಿಸುವ ಕಿನೌ°ರ್‌ ಪ್ರಾಂತ್ಯದಲ್ಲಿ ಬಿಯಾಸ್‌ ನದಿಗೆ ಕಟ್ಟಲಾಗಿದ್ದ ರಿಸ್ಪಾ ಹೆಸರಿನ ಸೇತುವೆ ಕೊಚ್ಚಿ ಹೋಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, 9 ಮಂದಿ  ಮೃತಪಟ್ಟಿದ್ದಾರೆ. ಪ್ರಮುಖ ನದಿಗಳಾದ ಗಂಗಾ, ಯಮುನಾ, ಸಾಯಿ, ರಪ್ತಿ ಹಾಗೂ ಬನ್ಸಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಜಮ್ಮುವಿನಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳಿಗೆ ಹಾನಿಯಾಗಿದ್ದು, ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರಸಕ್ತ ವರ್ಷ ಮಳೆ ಸಂಬಂಧಿ ಘಟನೆಗಳಿಗೆ 7 ರಾಜ್ಯಗಳಲ್ಲಿ 776 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

Advertisement

ಸದ್ಯಕ್ಕೆ ಶಬರಿಮಲೆ ಭೇಟಿ ಬೇಡ
ಜಗತ್ಪ್ರಸಿದ್ಧ ಶಬರಿ ಮಲೆ ಅಯ್ಯಪ್ಪ ದೇಗುಲದ ಬಳಿ ಹರಿಯುವ ಪಂಬಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು, ಭಕ್ತಾದಿಗಳು ಸದ್ಯದ ಮಟ್ಟಿಗೆ ಶಬರಿಮಲೆಗೆ ಭೇಟಿ ನೀಡಬಾರದೆಂದು ಪಟ್ಟಣಂ ತಿಟ್ಟ ಜಿಲ್ಲಾಡಳಿತ ಸೂಚಿಸಿದೆ. ಕೊಚುಪಂಬಾ, ಅನಾತ್ತೂಡ್‌-ಕಕ್ಕಿ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದು ಪ್ರವಾಹ ಭೀತಿಗೆ ಕಾರಣ. 

Advertisement

Udayavani is now on Telegram. Click here to join our channel and stay updated with the latest news.

Next