Advertisement

9 ವರ್ಷ ಬಳಿಕ ಪ್ರತಿಷ್ಠಿತ ಕುಟುಂಬಗಳ ಮುಖಾಮುಖಿ!

06:00 AM Oct 28, 2018 | |

ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಮೈಲಿಗಲ್ಲುಗಳನ್ನು ಸೃಷ್ಟಿಸಿದ ಮಲೆನಾಡಿನ ಎರಡು ಪ್ರಮುಖ ರಾಜಕೀಯ ಕುಟುಂಬಗಳು ಒಂಭತ್ತು ವರ್ಷಗಳ ಬಳಿಕ ಮತ್ತೆ ಮುಖಾಮುಖಿಯಾಗುತ್ತಿವೆ. ಶಿವಮೊಗ್ಗ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಬಂಗಾರಪ್ಪ ಮತ್ತು ಬಿ.ಎಸ್‌. ಯಡಿಯೂರಪ್ಪ ಹೆಸರು ಚಿರಸ್ಥಾಯಿ. ಈ ಇಬ್ಬರೂ ತಮ್ಮ ಚಾಣಾಕ್ಷತನದ ರಾಜಕಾರಣದಿಂದ ಬಹಳಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೆಲವೊಮ್ಮೆ ಮುಗ್ಗರಿಸಿದ್ದರೂ, ಮತ್ತೆ ಮೇಲೆದ್ದು ಪಕ್ಷಗಳನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಇಬ್ಬರು ಪ್ರಮುಖ ರಾಜಕಾರಣಿಗಳು ಚುನಾವಣೆಗಳಲ್ಲಿ ನೇರ ಎದುರಾಳಿಗಳಾಗಿದ್ದು ಒಮ್ಮೆ ಮಾತ್ರ. ಕುಟುಂಬದ ಹಿನ್ನೆಲೆಯಿಂದ ನೋಡಿದಾಗ ಒಟ್ಟಾರೆ ನಾಲ್ಕನೇ ಬಾರಿ ಎದುರಾಗುತ್ತಿವೆ.

Advertisement

ಜಿಲ್ಲೆ ಜತೆಗೆ ರಾಜ್ಯ ರಾಜಕಾರಣದಲ್ಲಿಯೂ ಚಾಣಾಕ್ಷತನ ಮೆರೆದ ಬಂಗಾರಪ್ಪ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರ ಕುಟುಂಬದ ಕುಡಿಗಳು ಲೋಕಸಭೆ ಉಪಚುನಾವಣೆಯಲ್ಲಿ ಎದುರಾಳಿಗಳಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಹಾಗೂ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಕೂಟದಿಂದ ಮಾಜಿ ಶಾಸಕ ಮಧು ಬಂಗಾರಪ್ಪ ಕಣದಲ್ಲಿದ್ದು, ಸೈದ್ದಾತಿಕವಾಗಿ ವಿರುದ್ದ ದಿಕ್ಕಿನ ಎರಡು ಕುಟುಂಬಗಳು ಮತ್ತೂಮ್ಮೆ ತೊಡೆ ತಟ್ಟಿವೆ.

“ಸೋಲಿಲ್ಲದ ಸರದಾರ’ ಎಂದೇ ಖ್ಯಾತಿ ಪಡೆದಿದ್ದ ಬಂಗಾರಪ್ಪ ಅವರಿಗೆ ಅವರ ಕಡೇ ಎರಡು ಚುನಾವಣೆಗಳಲ್ಲಿ ಸೋಲಿನ ರುಚಿ ತೋರಿಸಿದ್ದು ಇದೇ ಯಡಿಯೂರಪ್ಪ ಕುಟುಂಬ. ಒಮ್ಮೆ ಯಡಿಯೂರಪ್ಪ ಸೋಲುಣಿಸಿದರೆ, ಮತ್ತೂಮ್ಮೆ ಅವರ ಪುತ್ರ ರಾಘವೇಂದ್ರ ಸೋಲುಣಿಸಿದ್ದರು. ಅದಾದ ಬಳಿಕ ಈ ಎರಡು ಕುಟುಂಬಗಳು ಪರಸ್ಪರ ಎದುರಾಗಿರಲಿಲ್ಲ. 9 ವರ್ಷಗಳ ಬಳಿಕ ಈಗ ಅದಕ್ಕೆ ವೇದಿಕೆ ಒದಗಿಸಿದೆ. ಬಿಜೆಪಿಗೆ ಸಮರ್ಥ ಎದುರಾಳಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದಾರೆ.

ಬಂಗಾರಪ್ಪ ಹಾಗೂ ಯಡಿಯೂರಪ್ಪ 2008ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನೇರ ಎದುರಾಳಿಗಳಾದರು. ಆದರೆ, ಅಷ್ಟೊತ್ತಿಗಾಗಲೇ ವಯಸ್ಸು ಹಾಗೂ ಅನಾರೋಗ್ಯದ ಕಾರಣ ಬಂಗಾರಪ್ಪ ರಾಜಕೀಯವಾಗಿ ದಣಿದಿದ್ದರು. ಜತೆಗೆ ಆರ್ಥಿಕವಾಗಿಯೂ ಕುಗ್ಗಿ ಹೋಗಿದ್ದರು. ಇಷ್ಟಾಗಿಯೂ ಛಲ ಬಿಡದೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಯಡಿಯೂರಪ್ಪ ವಿರುದ್ದ ತೊಡೆ ತಟ್ಟಿ ಶಿಕಾರಿಪುರದಿಂದ ಕಣಕ್ಕಿಳಿದರು. ಆದರೆ, ಶಿಕಾರಿಪುರದ ಜನ ಬಂಗಾರಪ್ಪ ಅವರಿಗೆ ಸುಮಾರು 46 ಸಾವಿರ ಮತಗಳ ಅಂತರದಿಂದ ಸೋಲುಣಿಸಿದ್ದರು. ಅದಾಗಿ ಒಂದೇ ವರ್ಷದಲ್ಲಿ ಬಂದ 2009ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಂಗಾರಪ್ಪ ತಮ್ಮ ಕಟ್ಟಕಡೆಯ ಸ್ಪರ್ಧೆಯಲ್ಲಿ ಬಿ.ವೈ. ರಾಘವೇಂದ್ರಗೆ ಪ್ರತಿಸ್ಪ ರ್ಧಿಯಾಗಿದ್ದರು. ವಯೋಮಾನ, ಕಾಯಿಲೆ ನಡುವೆ ಸ್ಪರ್ಧಿಸಿ 52 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ತಮ್ಮ ತಂದೆಯ ಜೀವನದ ಕಡೇ ಎರಡು ಚುನಾವಣೆ ಸೋಲಿನ ವಿರುದ್ದ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಅವಕಾಶ ಮಧು ಬಂಗಾರಪ್ಪ ಅವರಿಗೆ ದೊರೆತಿದೆ. ಅವಕಾಶ ಎಷ್ಟರ ಮಟ್ಟಿಗೆ ಸದುಪಯೋಗವಾಗಲಿದೆ ಎಂಬ ಕುತೂಹಲ ಜನರಲ್ಲಿದೆ.

ಬಿಎಸ್‌ವೈ ಎದುರು ಶಿವಪ್ಪ ಗೆಲುವು
80ರ ದಶಕದಿಂದಲೂ ಎರಡು ಪ್ರತ್ಯೇಕ ಪಕ್ಷಗಳಲ್ಲಿದ್ದುಕೊಂಡು ರಾಜಕೀಯ ಮಾಡಿಕೊಂಡು ಬಂದಿದ್ದ ಅವರಿಬ್ಬರೂ 1991ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಎದುರಾಳಿಗಳಾದರು. ಶಿಕಾರಿಪುರ ವಿಧಾಸಭೆಯಲ್ಲಿ ಸತತ ಎರಡು ಚುನಾವಣೆಗಳಲ್ಲಿ ಜಯಗಳಿಸಿದ್ದ ಯಡಿಯೂರಪ್ಪ ಮೊದಲ ಬಾರಿಗೆ 1991ರಲ್ಲಿ ಲೋಕಸಭೆಗೆ ಸ್ಪರ್ಧೆಗಿಳಿದರು. ಬಂಗಾರಪ್ಪ ಅವರು ತಮ್ಮ ಸಂಬಂಧಿ ಕೆ.ಜಿ.ಶಿವಪ್ಪ ಅವರನ್ನು ಚುನಾವಣೆ ರಾಜಕೀಯಕ್ಕೆ ಕರೆ ತಂದಿದ್ದರು. ಶಿವಪ್ಪ ಅವರು ಹೆಸರಿಗೆ ಮಾತ್ರ ಸ್ಪರ್ಧಿಯಾಗಿದ್ದರೂ ನೈಜವಾಗಿ ಅಲ್ಲಿ ಸ್ಪರ್ಧೆ ಏರ್ಪಟ್ಟಿದ್ದು ಯಡಿಯೂರಪ್ಪ ಮತ್ತು ಬಂಗಾರಪ್ಪ ನಡುವೆ. ಯಡಿಯೂರಪ್ಪರನ್ನು 41 ಸಾವಿರ ಮತಗಳ ಅಂತರದಿಂದ ಮಣಿಸಿ ಕೆ.ಜಿ. ಶಿವಪ್ಪರನ್ನು ಬಂಗಾರಪ್ಪ ಗೆಲ್ಲಿಸಿಕೊಂಡಿದ್ದರು.

Advertisement

 ● ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next