Advertisement

Bihar: ರೈಲು ಎಂಜಿನ್‌ ಕದ್ದಾಯ್ತು…ರಾತ್ರೋರಾತ್ರಿ ಕೊಳ ನಾಪತ್ತೆ…ಗುಡಿಸಲು ನಿರ್ಮಾಣ!

01:27 PM Jan 01, 2024 | Nagendra Trasi |

ಪಾಟ್ನಾ: ಕಬ್ಬಿಣದ ಸೇತುವೆ, ರೈಲು ಎಂಜಿನ್‌ ಕಳವು ಮಾಡುತ್ತಿರುವ ಘಟನೆಯ ಪಟ್ಟಿಗೆ ಇದೀಗ ಇಡೀ ನೀರಿನ ಕೊಳವನ್ನು ರಾತ್ರೋರಾತ್ರಿ ಮಣ್ಣಿನಿಂದ ತುಂಬಿಸಿ ಅಲ್ಲಿ ಗುಡಿಸಲನ್ನು ಕಟ್ಟಿರುವ ಘಟನೆ ಬಿಹಾರದ ದರ್ಭಾಂಗ್‌ ಜಿಲ್ಲೆಯಲ್ಲಿ ನಡೆದಿದ್ದು, ಇದರಿಂದ ಸ್ಥಳೀಯರಿಗೆ ಅಚ್ಚರಿಯಾಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:

ಅಚ್ಚರಿಯ ಬೆಳವಣಿಗೆ ಎಂಬಂತೆ ಜಲಮೂಲವಿದ್ದ ಜಾಗದಲ್ಲಿ ಏಕಾಏಕಿ ಗುಡಿಸಲನ್ನು ನಿರ್ಮಿಸಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಭೂ ಮಾಫಿಯಾ ಗ್ಯಾಂಗ್‌ ಈ ಕೃತ್ಯ ಎಸಗಿರಬೇಕೆಂಬುದು ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿ ಯಾರೂ ಇರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಈ ಕೊಳ ಸಾರ್ವಜನಿಕ ಸ್ವತ್ತಾಗಿದ್ದು, ಇದನ್ನು ಮೀನು ಸಾಕಾಣೆ ಹಾಗೂ ಇತರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಆದರೆ ದರ್ಭಾಂಗ್‌ ನಲ್ಲಿ ಭೂಮಿಯ ಬೆಲೆ ಹೆಚ್ಚಳವಾಗುತ್ತಿದ್ದಂತೆಯೇ ಭೂ ಮಾಫಿಯಾ ಇದೀಗ ಜಲಮೂಲದ ಮೇಲೆ ದೃಷ್ಟಿ ನೆಟ್ಟಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಆರಂಭದಲ್ಲಿ ಕೊಳವನ್ನು ಮಣ್ಣಿನಿಂದ ಮುಚ್ಚಲು ಶುರು ಮಾಡಿದ ಸಂದರ್ಭದಲ್ಲಿ ಸ್ಥಳೀಯರು ವಲಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆಲಸವನ್ನು ನಿಲ್ಲಿಸಿದ್ದರು. ಆದರೆ ಭೂ ಮಾಫಿಯಾ ರಾತ್ರೋರಾತ್ರಿ ಕಾರ್ಯನಿರ್ವಹಿಸುವ ಮೂಲಕ ಇಡೀ ಕೊಳವನ್ನೇ ತುಂಬಿಸಿ ಗುಡಿಸಲು ಕಟ್ಟಿರುವುದಾಗಿ ವರದಿ ವಿವರಿಸಿದೆ.

Advertisement

ಬಿಹಾರದಲ್ಲಿ ಇತ್ತೀಚೆಗೆ ಊಹಿಸಲು ಸಾಧ್ಯವಿಲ್ಲದಂತಹ ನಡೆದ ಕೆಲವು ಕಳವು ಘಟನೆಗಳಿಂದ ಹೆಚ್ಚು ಸುದ್ದಿಯಲ್ಲಿತ್ತು. 2022ರ ನವೆಂಬರ್‌ ನಲ್ಲಿ ರೈಲಿನ ಡೀಸೆಲ್‌ ಎಂಜಿನ್‌ ಅನ್ನು ಕಳವು ಮಾಡಿದ ಘಟನೆ ನಡೆದಿತ್ತು. ಅದೇ ರೀತಿ ರೋಹ್ಟಾಸ್‌ ಜಿಲ್ಲೆಯಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಕಳವು ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next