ಹೊಸದಿಲ್ಲಿ : ನಾಗಾಲ್ಯಾಂಡನ್‌ಲ್ಲಿ ಜಾರಿಯಲ್ಲಿರುವ ಸೇನಾಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ಇನ್ನೂ ಆರು ತಿಂಗಳು ಕಾಲ ವಿಸ್ತರಿಸುವುದಕ್ಕೆ ಕೇಂದ್ರ ಗೃಹ ಇಲಾಖೆ ನಿರ್ಧರಿಸಿದೆ.
ಇದನ್ನೂ ಓದಿ:ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 23 ಕೂಲಿ ಕಾರ್ಮಿಕರಲ್ಲಿ ಕೋವಿಡ್ ಸೋಂಕು
ನಾಗಲ್ಯಾಂಡ್‌ನಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ನಾಗರಿಕ ಹಕ್ಕುಗಳ ರಕ್ಷಣೆಯ ಉದ್ದೇಶದಿಂದಲೇ ಈ ಕಾಯಿದೆಯನ್ನು ಇನ್ನೂ ಆರು ತಿಂಗಳು ವಿಸ್ತರಿಸಲಾಗುತ್ತಿದೆ. ಸದ್ಯಕ್ಕೆ ಕಾಯಿದೆ ವಾಪಾಸ್ ಪಡೆದುಕೊಳ್ಳುವ ಸ್ಥಿತಿಯಲ್ಲಿ ನಾಗಾಲ್ಯಾಂಡ್ ಇಲ್ಲ ಎಂದು ಕೇಂದ್ರ ಗೃಹ ಇಲಾಖೆ ಅಭಿಪ್ರಾಯಪಟ್ಟಿದೆ.
ಬಂಡುಕೋರರು ಎಂದು ಭಾವಿಸಿ ಸೇನಾಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ 14 ನಾಗರಿಕರು ಕಳೆದ ತಿಂಗಳು ಪ್ರಾಣ ಕಳೆದುಕೊಂಡಿದ್ದರು. ಈ ಬಗ್ಗೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಸೇನಾಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ವಾಪಾಸ್ ಪಡೆಯುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದ್ದವು.
ಸಂಸತ್ತಿನಲ್ಲೂ ಈ ಪ್ರಕರಣ ವಿವಾದ ಸೃಷ್ಟಿಸಿತ್ತು. ತಪ್ಪು ಗ್ರಹಿಕೆಯಿಂದ ಈ ಅವಘಡ ಸಂಭವಿಸಿದೆ ಎಂದು ಸೇನಾಪಡೆ ವಿಷಾದ ವ್ಯಕ್ತಪಡಿಸಿತ್ತು. ಗುಪ್ತಚರ ಮಾಹಿತಿಯ ತಪ್ಪು ಗ್ರಹಿಕೆಯಿಂದ ನಾಗರಿಕರನ್ನು ಬಂಡುಕೋರರು ಎಂದು ಭಾವಿಸಲಾಗಿತ್ತು ಎಂದು ಸೇನೆ ಸ್ಪಷ್ಟನೆ ನೀಡಿತ್ತು. ಈ ಬಗ್ಗೆ ರಕ್ಷಣಾ ಇಲಾಖೆಯಿಂದ ಆಂತರಿಕ ತನಿಖೆಗೂ ಆದೇಶ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಕಾಯಿದೆ ವಾಪಾಸ್ ಪಡೆಯುವುದು ಸೂಕ್ತವಲ್ಲ ಎಂದು ಗೃಹ ಹಾಗೂ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಮುಂದಿನ ಆರು ತಿಂಗಳು ಕಾಲ ಕಾಯಿದೆ ವಿಸ್ತರಿಸಲು ನಿರ್ಧರಿಸಲಾಗಿದೆ. ಗೃಹ ಇಲಾಖೆ ಮೂಲಗಳ ಪ್ರಕಾರ ಕೇಂದ್ರ ಸರಕಾರ ಸದ್ಯಕ್ಕೆ ಈ ಕಾಯಿದೆಯನ್ನು ವಾಪಾಸ್ ಪಡೆಯುವ ಮನಸ್ಥಿತಿ ಹೊಂದಿಲ್ಲ.