ಅಹಮದಾಬಾದ್/ನವದೆಹಲಿ:ಕೋವಿಡ್ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಹಮದಾಬಾದ್ ನಲ್ಲಿ ಮ್ಯಾರಥಾನ್ 57ಗಂಟೆಗಳ ಕಾಲ ಕರ್ಫ್ಯೂ ಜಾರಿಗೊಳಿಸಿದ ನಂತರ ಇದೀಗ ಗುಜರಾತ್ ಸರ್ಕಾರ ಇನ್ನೂ ಮೂರು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವುದು ಪತ್ತೆಯಾದ ಪರಿಣಾಮ ಗುಜರಾತ್ ಸರ್ಕಾರ ರಾಜ್ಯದ ಸೂರತ್, ವಡೋದರಾ ಮತ್ತು ರಾಜ್ ಕೋಟ್ ನಗರಗಳಲ್ಲಿ ಶನಿವಾರ (ನವೆಂಬರ್ 21, 2020)ದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ.
ಸೂರತ್, ರಾಜ್ ಕೋಟ್ ಮತ್ತು ವಡೋದರಾದಲ್ಲಿ ಶನಿವಾರದಿಂದ ರಾತ್ರಿ 9ಗಂಟೆಯಿಂದ ಬೆಳಗ್ಗೆ 6ಗಂಟೆ ತನಕ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತೀನ್ ಪಟೇಲ್ ಘೋಷಿಸಿದ್ದಾರೆ.
ಇದನ್ನೂ ಓದಿ:ಅಮೆರಿಕದ ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ: ಎಂಟು ಜನರಿಗೆ ಗಾಯ
ಕೋವಿಡ್ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕರ್ಫ್ಯೂ ಜಾರಿ ಅನಿವಾರ್ಯವಾಗಿದ್ದು, ಜನರು ಅಧಿಕಾರಿಗಳಿಗೆ ಸಹಕಾರ ನೀಡಬೇಕೆಂದು ಉಪ ಮುಖ್ಯಮಂತ್ರಿ ಪಟೇಲ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ.