Advertisement

ಚೆಂದುಳ್ಳಿ ಚೆಲುವೆ ನಟಿ ದಿವ್ಯಾ ಭಾರತಿ ಸಾವಿನ ರಹಸ್ಯ ಇನ್ನೂ ನಿಗೂಢ!

01:19 PM May 10, 2018 | Sharanya Alva |

ಬಾಲಿವುಡ್ ಸಿನಿಮಾರಂಗದಲ್ಲಿ ಅಪ್ರತಿಮ ಸೌಂದರ್ಯ ಹೊಂದಿದ್ದ ನಟಿ ಎಂದೇ ಆಕೆ ಹೆಸರಾಗಿದ್ದಳು..90ರ ದಶಕದ ಆರಂಭದಲ್ಲಿ ಆಕೆ ಶ್ರೀದೇವಿಯನ್ನೂ ಮೀರಿಸಲಿದ್ದಾರೆ ಎಂಬ ಗುಲ್ಲು ಹಬ್ಬಿತ್ತು. 14ನೇ ವಯಸ್ಸಿಗೆ ಚಿತ್ರರಂಗ ಪ್ರವೇಶಿಸಿ ಚಿತ್ರರಸಿಕರ ಮನಗೆದ್ದಿದ್ದ ಈ ನಟಿ 19ನೇ ವಯಸ್ಸಿಗೆ ದುರಂತ ಸಾವನ್ನು ಕಂಡಿದ್ದಳು. ಆಕೆಯ ಸಾವಿನ ಸುತ್ತ ಹಲವು ಅನುಮಾನಗಳು ಇಂದಿಗೂ ಉಳಿದುಕೊಂಡಿದೆ. ಆಕೆಯನ್ನು ಕೊಂದವರು ಯಾರು? ಇದು ಕೊಲೆಯೋ? ಆತ್ಮಹತ್ಯೆಯೋ? ಭೂಗತಪಾತಕಿಗಳ ಕೈವಾಡವೇ ಎಂಬ ಜಿಜ್ಞಾಸೆ ಮುಂದುವರಿದಿದೆ. ಹೌದು ಈಕೆ ಬೇರೆ ಯಾರೂ ಅಲ್ಲ ದಿವ್ಯಾ ಭಾರತಿ!

Advertisement

1974 ಫೆಬ್ರುವರಿ 25ರಂದು ಮುಂಬೈಯಲ್ಲಿ ದಿವ್ಯಾ ಓಂ ಪ್ರಕಾಶ್ ಭಾರತಿ ಜನಿಸಿದ್ದಳು. ಮಾಡೆಲಿಂಗ್ ಕ್ಷೇತ್ರದಲ್ಲಿ ದಿವ್ಯಾ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿತ್ತು. 14ನೇ ವಯಸ್ಸಿಗೆ ದಿವ್ಯಾ ಭಾರತಿಗೆ ಸಿನಿಮಾದಲ್ಲಿ ನಟಿಸುವಂತೆ ಆಫರ್ ಬಂದಿದ್ದವು. 1990ರಲ್ಲಿ ತೆರೆಕಂಡಿದ್ದ ತೆಲುಗು ಸಿನಿಮಾ ಬೊಬ್ಬಿಲಿ ರಾಜಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಹೀರೋ ಆಗಿದ್ದ ದಿವ್ಯಾ ಭಾರತಿಯ ವಯಸ್ಸು 16!

ಹಲವಾರು ತೆಲುಗು ಸಿನಿಮಾದಲ್ಲಿ ನಟಿಸಿದ ಬಳಿಕ 1992ರಲ್ಲಿ ಬಾಲಿವುಡ್ ನ ವಿಶ್ವಾತ್ಮಾ ಸಿನಿಮಾದಲ್ಲಿ ನಟಿಸಿದ್ದರೆ, ಬಳಿಕ ಗೋವಿಂದ್ ಹಾಗೂ ರಿಷಿ ಕಪೂರ್ ಜೊತೆ ಶೋಲಾ ಔರ್ ಶಬನ್ಮಮ್  ಮತ್ತು ದೀವಾರ್ ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಳು.
1992 ಮತ್ತು 1993ರಲ್ಲಿ ದಿವ್ಯಾ ಭಾರತಿ ಬರೋಬ್ಬರಿ 14 ಸಿನಿಮಾಗಳಲ್ಲಿ ನಟಿಸುವ ಮೂಲಕ ದಾಖಲೆಯನ್ನೇ ನಿರ್ಮಿಸಿಬಿಟ್ಟಿದ್ದಳು. ಹಿಂದಿ, ಇಂಗ್ಲೀಷ್ ಹಾಗೂ ಮರಾಠಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ದಿವ್ಯಾ ಭಾರತಿ ಮುಂಬೈನ ಜುಹುವಿನ ಮನೆಕ್ಜಿ ಕೂಪರ್ ಹೈಸ್ಕೂಲ್ ನಲ್ಲಿ 9ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿದ್ದಳು. ಶಿಕ್ಷಣಕ್ಕೆ ಗುಡ್ ಬೈ ಹೇಳಿದ್ದ ದಿವ್ಯಾ ಭಾರತಿ ಸಿನಿಮಾರಂಗ ಪ್ರವೇಶಿಸಿದ್ದಳು. ಕೇವಲ ಅತೀ ಕಡಿಮೆ ಅವಧಿಯಲ್ಲಿ ದಿವ್ಯಾ ಭಾರತಿ ಬೆಳ್ಳಿ ಪರದೆಯಲ್ಲಿ ಮಿಂಚಿ, ಘಟಾನುಘಟಿ ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆದಿದ್ದಳು. ಸಾಥ್ ಸಮುಂದರ್ ಹಾಡಂತೂ ದಿವ್ಯಾ ಭಾರತಿಯನ್ನು ಬಾಲಿವುಡ್ ನ ಮುಖ್ಯ ಭೂಮಿಕೆಗೆ ತಂದು ನಿಲ್ಲಿಸಿತ್ತು.

1992ರಲ್ಲಿ ಸಾಜಿದ್ ಜತೆ ವಿವಾಹ:
ಶೋಲಾ ಔರ್ ಶಬನಮ್ ಚಿತ್ರದ ಶೂಟಿಂಗ್ ವೇಳೆ ನಟ ಗೋವಿಂದ್ ಮೂಲಕ ಭಾರತಿಗೆ ಸಾಜಿದ್ ನಾಡಿಯಾವಾಲನ ಪರಿಚಯವಾಗಿತ್ತು. ಈ ಗೆಳೆತನದ ಹಿನ್ನೆಲೆಯಲ್ಲಿ 1992ರ ಮೇ 10ರಂದು ಹೇರ್ ಡ್ರೆಸ್ಸರ್ ಸಂಧ್ಯಾ, ಆಕೆಯ ಗಂಡ ಹಾಗೂ ತುಳಸಿ ಅಪಾರ್ಟ್ ಮೆಂಟ್ ಮಾಲೀಕ ಕಾಝಿ ಸಮ್ಮುಖದಲ್ಲಿ ದಿವ್ಯಾ ಸಾಜಿದ್ ನನ್ನು ವಿವಾಹವಾಗಿದ್ದಳು.

Advertisement

ದಿವ್ಯಾ ಭಾರತಿ ಲಾಡ್ಲಾ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ವಿಧಿ ವಿಪರ್ಯಾಸ ಈ ಸಿನಿಮಾ ಪೂರ್ಣಗೊಳಿಸುವ ಮುನ್ನವೇ ದಿವ್ಯಾ ಭಾರತಿ ಇಹಲೋಕ ತ್ಯಜಿಸಿದ್ದಳು. ನಂತರ ದಿವ್ಯಾ ಭಾರತಿ ಸ್ಥಾನಕ್ಕೆ ಶ್ರೀದೇವಿಯನ್ನು ತಂದು ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲಾಗಿತ್ತು. ತೆಲುಗಿನ ಥೋಲಿ ಮುದ್ದು ಸಿನಿಮಾವನ್ನು ರಂಭಾ ನಟಿಸುವ ಮೂಲಕ ಪೂರ್ಣಗೊಳಿಸಿದ್ದರು. ದೇವ್ ಆನಂದ್ ದಿವ್ಯಾ ಭಾರತಿ ಸಾವಿನ ಸುತ್ತ ಹೆಣೆದಿರುವ ಕಥಾ ಹಂದರ ಹೊಂದಿದ್ದ ಚಾರ್ಜ್ ಶೀಟ್ ಎಂಬ ಸಿನಿಮಾವನ್ನು ನಿರ್ಮಿಸಿದ್ದರು. ಈ ಸಿನಿಮಾ 2011ರ ಸೆಪ್ಟೆಂಬರ್ 30ರಂದು ತೆರೆಕಂಡಿತ್ತು.

ಮಹಡಿಯಿಂದ ಕೆಳಗೆ ಬಿದ್ದು ದಿವ್ಯಾ ಸಾವು!
1993ರ ಏಪ್ರಿಲ್ 5ರಂದು ಮುಂಬೈನ ಅಂಧೇರಿ ಪಶ್ಚಿಮದ ವೆರ್ಸೋವಾದ ತುಳಸಿ ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಕೆಳಗೆ ಬಿದ್ದು ನಟಿ ದಿವ್ಯಾ ಭಾರತಿ ದುರಂತ ಸಾವನ್ನು ಕಂಡಿದ್ದಳು.

ದಿವ್ಯಾ ಸಾವಿನ ಹಿಂದೆ ಮಾಫಿಯಾ, ಪತಿ ಕೈವಾಡ?
ಹೌದು ದಿವ್ಯಾ ಭಾರತಿ ಸಾವಿನ ರಹಸ್ಯ ಇಂದಿಗೂ ನಿಗೂಢವಾಗಿ ಉಳಿದಿದೆ. ಅಂದು ಮಾಧ್ಯಮಗಳಲ್ಲಿ ದಿವ್ಯಾ ಭಾರತಿ ಸಾವಿನ ಕುರಿತು ಹಲವು ಥಿಯರಿಗಳು ಹರಿದಾಡಿದ್ದವು. ದಿವ್ಯಾ ಭಾರತಿ ಅತಿಯಾದ ಮದ್ಯ ಸೇವಿಸಿದ್ದು, ಅಪಾರ್ಟ್ ಮೆಂಟ್ ನ ಕಿಟಕಿ ಜಾಗದಲ್ಲಿ ಕುಳಿತಿದ್ದಿರಿಂದ ಆಯ ತಪ್ಪಿ ಬಿದ್ದ ಪರಿಣಾಮ ಸಾವನ್ನಪ್ಪಿರುವುದಾಗಿ ತಿಳಿಸಿದ್ದರೆ, ಮತ್ತೊಂದು ಥಿಯರಿ ಪ್ರಕಾರ ದಿವ್ಯಾ ಭಾರತಿಯನ್ನು ಪತಿ ಸಾಜಿದ್ ನೇ ಮಹಡಿಯಿಂದ ತಳ್ಳಿ ಸಾಯಿಸಿರಬೇಕೆಂದು ಶಂಕಿಸಲಾಗಿತ್ತು. ಸಾಜಿದ್ ತನ್ನ ಮದುವೆಯಾಗುವ ಮೊದಲೇ ತನ್ನ(ದಿವ್ಯಾ) ತಾಯಿ ಜತೆ ಸಂಬಂಧ ಇತ್ತೆಂಬ ವಿಚಾರ ತಿಳಿದ ಮೇಲೆ ದಿವ್ಯಾ ಅತಿಯಾಗಿ ಮದ್ಯ ಸೇವಿಸಲು ಆರಂಭಿಸಿದ್ದಳು ಊಹಾಪೋಹ ಅಂದು ಹರಿದಾಡಿತ್ತು.

ದಿವ್ಯಾ ಭಾರತಿ ಸಾವಿನ ಹಿಂದೆ ಭೂಗತ ಮಾಫಿಯಾದ ಕರಿನೆರಳು ಇದ್ದಿದ್ದೆಂದು ಹೇಳಲಾಗಿತ್ತು. ಆದರೆ 1998ರಲ್ಲಿ ಮುಂಬೈ ಪೊಲೀಸರು ಪ್ರಕರಣದ ತನಿಖೆಯನ್ನು ಅಂತ್ಯಗೊಳಿಸಿದ್ದರು. ದಿವ್ಯಾ ಭಾರತಿಯದ್ದು ಆಕಸ್ಮಿಕ ಸಾವು ಎಂಬ ಕಾರಣ ನೀಡಿ ತನಿಖೆ ಮುಕ್ತಾಯಗೊಳಿಸಿದ್ದರು. ಮುಂಬೈನ ವಿಲೇ ಪಾರ್ಲೆಯಲ್ಲಿ 1993ರ ಏಪ್ರಿಲ್ 7ರಂದು ದಿವ್ಯಾ ಭಾರತಿಯ ಅಂತ್ಯಕ್ರಿಯೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next