ಮುಳಬಾಗಿಲು: ಯಾರು ಏನೇ ಹೇಳಿದರೂ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರ ಗೆಲುವು ಶತ ಸಿದ್ಧವೆಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಉಪಾಧ್ಯಕ್ಷ ಜಿ.ರಾಮಲಿಂಗಾರೆಡ್ಡಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆಲವು ಮುಖಂಡರು ಪಕ್ಷ ವಿರೋಧಿ ಚಟುವಟಿಕಗಳಲ್ಲಿ ತೊಡಗಿದ್ದು, ಅವರ ವಿರುದ್ಧ ಈಗಾಗಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಅದೇ ರೀತಿ ಕೆಲವು ಜನಪ್ರತಿನಿಧಿಗಳ ವಿರುದ್ಧವೂ ಕೆಪಿಸಿಸಿ ಮಟ್ಟದಲ್ಲಿ ಪಟ್ಟಿ ಸಿದ್ಧಗೊಂಡಿದ್ದು, ಮೇ 23ರ ನಂತರ ಅವರ ತಲೆ ದಂಡವಾಗಲಿದೆ ಎಂದು ಎಚ್ಚರಿಸಿದರು.
ಕೊತ್ತೂರ್ ಮಂಜುನಾಥ್ ಹೇಳಿಕೆಗೆ ಟಾಂಗ್: ಜೆಡಿಎಸ್ ಮುಖಂಡರು ಮೈತ್ರಿ ಧರ್ಮದಂತೆ ಉತ್ತಮವಾಗಿಯೇ ಕೆಲಸ ಮಾಡಿದ್ದಾರೆ. ಇನ್ನು ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದರೂ ಆ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ಗೆ ಮತ ಹಾಕಿರುವುದರಿಂದ ಯಾರು ಏನೇ ಹೇಳಿಕೊಂಡರೂ ಕೆಎಚ್ಎಂ ಗೆಲುವಿಗೆ ಯಾವುದೇ ಅಡ್ಡಿಯಿಲ್ಲವೆನ್ನುವ ಮೂಲಕ ಇತ್ತೀಚಿಗೆ ಹೇಳಿಕೆ ನೀಡಿದ್ದ ಕೊತ್ತೂರ್‌ಗೆ ಹೆಸರು ಹೇಳದೇ ಟಾಂಗ್ ನೀಡಿದರು.
ಸ್ಪೀಕರ್ ವಿರುದ್ಧ ಕಿಡಿ: ಕೆ.ಸಿ.ವ್ಯಾಲಿ ಯೋಜನೆ ಅವಳಿ ಜಿಲ್ಲೆಗಳಿಗೆ ತರಲು ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಎಂ.ವಿ.ವೆಂಕಟಪ್ಪ, ಕೃಷ್ಣಬೈರೇಗೌಡ, ಶಿವಶಂಕರ್‌ರೆಡ್ಡಿ, ಆಲಂಗೂರು ಶ್ರೀನಿವಾಸ್, ವಿ.ಮುನಿಯಪ್ಪ, ವಿ.ಆರ್.ಸುದರ್ಶನ್, ವೆಂಕಟಶಿವಾರೆಡ್ಡಿ, ನಾರಾಯಣಸ್ವಾಮಿ, ಸುಧಾಕರ್ ಸೇರಿ ಹಲವು ಮುಖಂಡರ ನಿಯೋಗ ತೆರಳಿ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ಸ್ಪಿಕರ್ ಕೆ.ಆರ್.ರಮೇಶ್‌ಕುಮಾರ್ ಈ ಯೋಜನೆ ತಾವೊಬ್ಬರೇ ತಂದಿರುವುದಾಗಿ ಹೇಳಿಕೊಳ್ಳುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಮುಖಂಡರು ಶ್ರಮಿಸಲಿ: ಅದೇ ರೀತಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ರಾಜ್ಯದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರದ ಮೈತ್ರಿ ಧರ್ಮದಂತೆ ತಾಲೂಕಿನ ಅಭ್ಯರ್ಥಿಯಾಗಿ ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಅವರನ್ನು ಕಣಕ್ಕಿಳಿಸಲಾಗಿದೆ. ಎರಡೂ ಪಕ್ಷಗಳ ಮುಖಂಡರೂ ಶ್ರಮಿಸುವ ಮೂಲಕ ಅವರನ್ನು ಗೆಲ್ಲಿಸಲಾಗುವುದು ಎಂದರು.
ಕಿಸಾನ್‌ಕೇತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರಗೌಡ, ರಾಜ್ಯ ಕಾಂಗ್ರೆಸ್‌ನ ಐ.ಟಿ.ಸೆಲ್ ಪ್ರಧಾನ ಕಾರ್ಯದರ್ಶಿ ಕಾರ್ಗಿಲ್ ವೆಂಕಟೇಶ್, ಹಿರಿಯ ವಕೀಲರಾದ ಬಷೀರ್, ಅಕ್ಮಲ್ಬೇಗ್, ವೆಂಕಟಮುನಿರೆಡ್ಡಿ, ಚೆಲ್ಲಪಲ್ಲಿ ಕೃಷ್ಣಾರೆಡ್ಡಿ ಹಲವರಿದ್ದರು.