ಗೋಕಾಕ: 2004ರಿಂದ ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬರಲಿ, ಆ ಸರ್ಕಾರದಲ್ಲಿ ಜಾರಕಿಹೊಳಿ ಕುಟುಂಬದ ಒಬ್ಬರಾದರೂ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುತ್ತಲೇ ಬಂದಿದ್ದರು. ಆದರೆ 17 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಜಾರಕಿಹೊಳಿ ಸಹೋದರರಿಗೆ ಸಚಿವ ಸ್ಥಾನ ಕೈತಪ್ಪಿ ಹೋಗಿದೆ!
ಇದನ್ನೂ ಓದಿ:ಮೇಕೆದಾಟು ವಿಚಾರವಾಗಿ ಯಾರೇ ಪ್ರತಿಭಟನೆ ಮಾಡಿದರೂ ನಮಗೆ ಸಂಬಂಧವಿಲ್ಲ: ಬೊಮ್ಮಾಯಿ
ಜಾರಕಿಹೊಳಿ ಸಹೋದರರು ಬೆಳಗಾವಿ ಜಿಲ್ಲಾ ರಾಜಕೀಯದಲ್ಲಷ್ಟೇ ಅಲ್ಲ, ರಾಜ್ಯ ರಾಜಕೀಯದಲ್ಲೂ ಪ್ರಭಾವಿ ಕುಟುಂಬ. ಐವರು ಸಹೋದರರಲ್ಲಿ ಮೂವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಬಾಲಚಂದ್ರ, ರಮೇಶ ಬಿಜೆಪಿ ಶಾಸಕರಾಗಿದ್ದರೆ, ಸತೀಶ ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸತೀಶ ಸಚಿವರಾಗುತ್ತಲೇ ಬಂದಿದ್ದಾರೆ. ಇನ್ನು ಬಿಜೆಪಿ ಸರ್ಕಾರ ಬಂದರೆ ಬಾಲಚಂದ್ರ ಸಚಿವರಾಗುತ್ತಲೇ ಬಂದಿದ್ದಾರೆ.
ಇತ್ತೀಚೆಗೆ ರಮೇಶ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾದರೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಜಾರಕಿಹೊಳಿ ಸಹೋದರ ಶ್ರಮ ಅಲ್ಲಗಳೆಯುವಂತಿಲ್ಲ. ಇಂತಹ ಸಂದರ್ಭದಲ್ಲಿ ಕಾನೂನು ತೊಡಕು ಇರುವುದರಿಂದ ರಮೇಶ ಬದಲು ಸಹೋದರ ಬಾಲಚಂದ್ರಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಸಹ ಹುಸಿಯಾಗಿದೆ.
ಹೀಗಾಗಿ “ಸಾವಕಾರ ಇಲ್ಲದ¨ ಸಂಪುಟ’ ಎಂಬಂತಾಗಿದೆ. ಸದ್ಯ ರಮೇಶ ಜಾರಕಿಹೊಳಿ ಸಿಡಿ ಪ್ರಕ ರಣ ಕೋರ್ಟ್ ನಲ್ಲಿದ್ದು ಇತ್ಯರ್ಥವಾದ ಬಳಿಕ ಮುಂದಿನ ಹಂತದ ಸಚಿವ ಸಂಪುಟದಲ್ಲಿ ರಮೇಶಗೆ ಸಚಿವ ಸ್ಥಾನ ನೀಡುವ ಆಶ್ವಾಸನೆಯನ್ನು ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ.