Advertisement

African swine fever: ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ- ದ.ಕ. ಜಿಲ್ಲೆಯಲ್ಲಿ ವಿಶೇಷ ನಿಗಾ

11:32 PM Aug 24, 2023 | Team Udayavani |

ಮಂಗಳೂರು: ಕೇರಳದಲ್ಲಿ ಹಂದಿಗಳಲ್ಲಿ ಆಫ್ರಿಕನ್‌ ಹಂದಿ ಜ್ವರ ದೃಢಪಟ್ಟಿರುವುದರಿಂದ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗ ಹರಡದಂತೆ ಅವಶ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Advertisement

ಆಫ್ರಿಕನ್‌ ಹಂದಿ ಜ್ವರವು ಸಾಕುಹಂದಿ ಮತ್ತು ಕಾಡುಹಂದಿಗಳಲ್ಲಿ ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಆ ಹಂದಿಗಳು ಸಾವನ್ನಪ್ಪುತ್ತವೆ. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಮತ್ತು ಲಸಿಕೆ ಇಲ್ಲದಿರುವುದರಿಂದ ನಿಯಮಾನುಸಾರ ರೋಗ ದೃಢೀಕರಣಗೊಂಡ ಪ್ರದೇಶದ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಹಂದಿಗಳನ್ನು ವಧೆ ಮಾಡಬೇಕಾಗಿರುತ್ತದೆ. ಶೇ. 100ರಷ್ಟು ಸಾವಿನ ಪ್ರಮಾಣ ಇರುವುದರಿಂದ ಹಂದಿ ಸಾಕಾಣಿಕೆದಾರರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಆಫ್ರಿಕನ್‌ ಹಂದಿ ಜ್ವರವು ಈ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬಂದಿರುವುದಿಲ್ಲ. ಆದ್ದರಿಂದ ಹಂದಿ ಸಾಕಾಣಿಕೆದಾರರು ಮತ್ತು ಸಾರ್ವಜನಿಕರು ಭಯಭೀತರಾಗುವ ಅವಶ್ಯಕತೆಯಿರುವುದಿಲ್ಲ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚೆಕ್‌ಪೋಸ್ಟ್‌ನಲ್ಲಿ ನಿಗಾ
ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ| ಅರುಣ್‌ ಕುಮಾರ್‌ ಶೆಟ್ಟಿ ಪ್ರತಿಕ್ರಿಯಿಸಿ, “ಆಫ್ರಿಕನ್‌ ಹಂದಿ ಜ್ವರ ರಾಜ್ಯಕ್ಕೆ ಹಬ್ಬದಂತೆ ತಡೆಗಟ್ಟಲು ಕೇರಳವನ್ನು ಸಂಪರ್ಕಿಸುವ ಗಡಿಭಾಗದ ಚೆಕ್‌ಪೋಸ್ಟ್‌ಗಳಾದ ತಲಪಾಡಿ, ಜಾಲೂÕರು, ಸಾರಡ್ಕದಲ್ಲಿ ವಿಶೇಷ ನಿಗಾ ಇರಿಸಲಾಗಿದೆ. ಮಾಂಸ ಸಾಗಾಟಕ್ಕೆ ಸದ್ಯಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ದ.ಕ. ಜಿಲ್ಲೆಯಿಂದ ಕೇರಳ ಭಾಗಕ್ಕೆ ಹೆಚ್ಚಾಗಿ ಹಂದಿ ಮಾಂಸ ರಫ್ತು ಆಗುತ್ತದೆ. ಈ ಹಿನ್ನೆಲೆಯಲ್ಲಿ ಕೇರಳ ಭಾಗಕ್ಕೆ ತೆರಳಿ ಬರುವ ವಾಹನಗಳ ಮೇಲೆ ಚೆಕ್‌ಪೋಸ್ಟ್‌ಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಹಂದಿ ಹಾಗೂ ಹಂದಿ ಮಾಂಸಗಳ ಸಾಗಾಣಿಕೆ ಮೇಲೆ ನಿಗಾ ಇರಿಸಲಾಗಿದೆ. ಇಲಾಖಾ ಪಶುವೈದ್ಯಾ ಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಎಲ್ಲ ಹಂದಿ ಫಾರಂಗಳಿಗೆ ಭೇಟಿ ನೀಡಿ ಹಂದಿ ಸಾಕಾಣಿಕೆದಾರರಿಗೆ ಸಲಹೆ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

ಮನುಷ್ಯರಿಗೆ ಹರಡುವುದಿಲ್ಲ

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಆಫ್ರಿಕನ್‌ ಹಂದಿ ಜ್ವರ ಹಂದಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಯಾವುದೇ ಕಾರಣಕ್ಕೂ ಮನುಷ್ಯರಿಗೆ ಹರಡುವುದಿಲ್ಲ. ಅನೇಕರಲ್ಲಿ ಈ ಬಗ್ಗೆ ಗೊಂದಲವಿದ್ದು, ಮನುಷ್ಯರಿಗೆ ಹರಡಿದ ಯಾವುದೇ ಉದಾಹರಣೆಗಳಿಲ್ಲ. ಸ್ಥಳೀಯ ಮಟ್ಟದಲ್ಲಿ ಹಂದಿಗಳನ್ನು ನಿರ್ವಹಣೆ ಮಾಡುವವರು ಪಶುಸಂಗೋಪನ ಇಲಾಖೆಯಿಂದ ಸೂಕ್ತ ಮುನ್ನೆಚ್ಚರಿಕೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next