ಕುಂಬಳೆ: ಬರ,ನೆರೆ, ಹಂದಿ,ಮಂಗ,ನವಿಲು ,ಆನೆ ಧಾಳಿಯಿಂದ ಕಂಗೆಟ್ಟಿರುವ ಕೃಷಿಕರು ಒಂದಲ್ಲ ಒಂದು ಸಮಸ್ಯೆಯ ಸುಳಿಯ ಅಡಕತ್ತರಿಯಲ್ಲಿ ಸಿಲುಕುತ್ತಲೇ ಇರುವರು.ಬೆಳೆದ ಬೆಳೆಗಳಿಗೆ ಬೆಲೆ ಕುಸಿತ,ರೋಗ,ರುಜಿನಗಳಿಗೆ ತಾವು ಕಷ್ಟಪಟ್ಟು ಬೆಳೆದ ಕೃಷಿ ನಾಶವಾಗಿ ಕೃಷಿಕರು ಬ್ಯಾಂಕ್ ಸಾಲವನ್ನು ಮರುಪಾವತಿಸಲಾಗದೆ ಗಂಭೀರವಾಗಿ ಚಿಂತಿಸುವಂತಾಗಿದೆ.
ತೆಂಗಿಗೆ ಪ್ರಾಣಿಗಳ ಕಾಟ, ಕಂಗಿಗೆ ಕೊಳೆರೋಗ ,ಭತ್ತದ ಬೆಳೆಗೆ ನುಸಿಗಳ ಕಾಟ,ಇತ್ಯಾದಿ ಕಾಡುತ್ತಿರುವ ಸಂದರ್ಭದಲ್ಲಿ ಇದೀಗ ಹೊಸದೊಂದು ಸೇರ್ಪಡೆಯಾಗಿದೆ.ಆಫ್ರಿಕನ್ ಬಸವನ ಹುಳು ಎಂಬ ಹುಳು ಕೃಷಿಕರ ಕೃಷಿಗೆ ದಾಳಿ ನಡೆಸುತ್ತಿದೆ.ಹೊಳೆಯ ನರೆನೀರಿನಲ್ಲಿ ಬಂದು ದಡಸೇರಿ ಪಕ್ಕದ ಕೃಷಿ ತೋಟಗಳಲ್ಲಿ ಸೇರಿ ಸಂಸಾರ ಮಾಡುವ ಈ ಹುಳು ಶಂಖವನ್ನು ಹೋಲುತ್ತಿದೆ,
ಚಿಪ್ಪಿನೊಳಗಿರುವ ಈ ಹುಳು ತೆಂಗು, ಕಂಗಿನ ಹಿಂಗಾರ,ಬಾಳೆ,ಭತ್ತ , ತರಕಾರಿಗಳನ್ನು ತಿಂದು ನಾಶ ಮಾಡುತ್ತಿದೆ.ಇದರಿಂದ ರೈತರು ಕಂಗಾಲಾಗಿರುವರು.ಕಾಸರಗೋಡು ಜಿಲ್ಲೆಯ ಪೈವಳಿಕೆ ಮೀಂಜ ಸಹಿತ ಇತರ ಕಡೆಗಳಲ್ಲೂ ಈ ಹುಳುಗಳ ಕಾಟ ಜೋರಾಗಿದೆ.
ಇದನ್ನು ಸುಲಭದಲ್ಲಿ ಸಾಯಿಸಲು ಆಗುವುದಿಲ್ಲ. ಚಿಪ್ಪಿನೊಳಗೆ ಅವಿತಿರುವ ಈ ಜೀವಿಯನ್ನು ಬಡಿದು ಸಾಯಿಸಬೇಕಾಗಿದೆ
ಮಲೆಯಾಳದಲ್ಲಿ ಒಚ್ಚ್ ಎನ್ನುವ ಈ ಜಂತುವಿನ ಅಧ್ಯಯನ ನಡೆಸಲಾಗುತ್ತಿದೆ.ಉಪ್ಪು ನೀರನ್ನು ಸುರಿದಲ್ಲಿ ,ಪಪ್ಪಾಯಿ ಸೊಪ್ಪಿನ ನೀರು,ಹೊಗೆಸೊಪ್ಪಿನ ನೀರು ಹಾಯಿಸಿದಲ್ಲಿ ಹುಳುಗಳು ಸಾಯಲು ಸಾಧ್ಯ.ಕೋಪರ್ ಸಲ್ಫೇಟ್ ಸಿಂಪಡಿಸಿದಲ್ಲೂ ಇದನ್ನು ಸಾಯಿಸ ಬಹುದು.ಕೃಷಿಕರಿಗೆ ಮಾರಕವಾಗಿರುವ ಈ ಹುಳುಗಳ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಪೈವಳಿಕೆ ಪಂಚಾಯತ್ ಕೃಷಿ ಭವನದ ಅಧಿಕಾರಿ ತಿಳಿಸಿದ್ದಾರೆ.
– ಅಚ್ಯುತ ಚೇವಾರ್