Advertisement

ಆಫ್ರಿಕ : ತಪ್ಪಿಸಿಕೊಂಡವರನ್ನು ಹುಡುಕುವುದೇ ಕೆಲಸ

02:58 PM Jun 01, 2020 | mahesh |

ಹರಾರೆ : ಆಫ್ರಿಕದ ದೇಶಗಳಲ್ಲಿ ಕ್ವಾರಂಟೈನ್‌ನಲ್ಲಿದ್ದವರು ತಪ್ಪಿಸಿಕೊಂಡು ಓಡಿಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರಿಗೀಗ ಅವರನ್ನು ಹುಡುಕುವುದೇ ದೊಡ್ಡ ತಲೆನೋವಿನ ಕೆಲಸವಾಗಿದೆ. ಹಲವು ಕ್ವಾರಂಟೈನ್‌ ಕೇಂದ್ರಗಳಿಂದ ನೂರಾರು ಮಂದಿ ತಪ್ಪಿಸಿಕೊಂಡು ಹೋಗಿದ್ದಾರೆ. ಈ ಪೈಕಿ ಅನೇಕ ಮಂದಿ ಕೋವಿಡ್‌ ಪೊಸಿಟಿವ್‌ ಆಗಿದ್ದರು ಮತ್ತು ಕೆಲವರಲ್ಲಿ ಕೋವಿಡ್‌ ಲಕ್ಷಣವಿತ್ತು. ಆದರೆ ಸಾಕಷ್ಟು ರಕ್ಷಣಾ ಉಡುಗೆಗಳು ಇಲ್ಲದ ಕಾರಣ ಅವರು ಓಡಿ ಹೋಗುವಾಗ ತಡೆಯಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ ಇಲ್ಲಿನ ಪೊಲೀಸರು.

Advertisement

ದಕ್ಷಿಣ ಆಫ್ರಿಕದಿಂದ ನುಸುಳಿ ಬಂದ 400 ಮಂದಿಯನ್ನು ಮಲವಿಯ ಬ್ಲಿಂಟಯರ್‌ ಸ್ಟೇಡಿಯಂನಲ್ಲಿ ಸ್ಥಾಪಿಸಿದ ಕ್ವಾರಂಟೈನ್‌ ಶಿಬಿರದಲ್ಲಿಡಲಾಗಿತ್ತು. ಆದರೆ ಇಲ್ಲಿಂದ ಬಹುಪಾಲು ಮಂದಿ ತಪ್ಪಿಸಿಕೊಂಡು ಹೋಗಿದ್ದಾರೆ.  ಕೆಲವರು ಪೊಲೀಸರಿಗೆ ಲಂಚ ಕೊಟ್ಟು ಪಲಾಯನ ಮಾಡಿದ್ದಾರೆ. ಮವಾಂಜ ಗಡಿಯಲ್ಲಿ ಸೋಂಕು ಪರೀಕ್ಷೆಗೆ ಕಾದು ನಿಂತಿದ್ದ 46 ಮಂದಿ ಅಲ್ಲಿಂದಲೇ ಸದ್ದಿಲ್ಲದೆ ಮಾಯವಾಗಿದ್ದಾರೆ. ಜಿಂಬಾಬ್ವೆಯಲ್ಲಿ ಒಟ್ಟು 148 ಮಂದಿ ಕ್ವಾರಂಟೈನ್‌ ಕೇಂದ್ರಗಳಿಂದ ತಪ್ಪಿಸಿಕೊಂಡಿದ್ದು, ಅವರನ್ನು ಹುಡುಕುವ ಪ್ರಯತ್ನಗಳೆಲ್ಲ ವಿಫ‌ಲಗೊಂಡಿವೆ. ಇಲ್ಲಿ 21 ದಿನಗಳ

ಕ್ವಾರಂಟೈನ್‌ ಕಡ್ಡಾಯ
ಕೆನ್ಯಾದಲ್ಲೂ ಕ್ವಾರಂಟೈನ್‌ ಕೇಂದ್ರಗಳಿಂದ ಜನರು ತಪ್ಪಿಸಿಕೊಂಡು ಹೋಗಿದ್ದಾರೆ. ಜಾಂಬಿಯ, ಘಾನಾ, ನೈಜೀರಿಯ, ಉಗಾಂಡ ಮತ್ತು ನಮಿಬಿಯಗಳಿಂದಲೂ ಈ ಮಾದರಿಯ ಹಲವು ಪ್ರಕರಣಗಳು ವರದಿಯಾಗಿವೆ.  ಪಲಾಯನ ಮಾಡುವ ಹಾವಳಿಯನ್ನು ತಪ್ಪಿಸುವ ಸಲುವಾಗಿ ಕೆಲವು ಕ್ವಾರಂಟೈನ್‌ ಕೇಂದ್ರಗಳಿಗೆ ಬಿಗು ಪೊಲೀಸ್‌ ಕಾವಲು ಹಾಕಲಾಗಿದೆ ಎಂದು ಜಿಂಬಾಬ್ವೆಯ ಮಾಹಿತಿ ಸಚಿವೆ ಮೋನಿಕಾ ಮುತ್ಸುವಂಗ ತಿಳಿಸಿದ್ದಾರೆ.

ಕ್ವಾರಂಟೈನ್‌ ಕೇಂದ್ರಗಳ ಕಳಪೆ ಸೌಲಭ್ಯಗಳು ಮತ್ತು 21 ದಿನಗಳ ಉಸಿರುಕಟ್ಟಿಸುವ ವಾತಾವರಣದಿಂದ ಪಾರಾಗಲು ಜನರು ಇಲ್ಲಿಂದ ಪಲಾಯನ ಮಾಡುತ್ತಿದ್ದಾರೆ. ಕೆಲವು ಕ್ವಾರಂಟೈನ್‌ ಕೇಂದ್ರಗಳೇ ವೈರಸ್‌ ಹರಡುವ ಕೇಂದ್ರಗಳಾಗಿವೆ ಎನ್ನುತ್ತಾರೆ ಇಲ್ಲಿನ ಜನರು.
ಆದರೆ ಸರಕಾರಗಳು ನಾವು ಕನಿಷ್ಠ ಸೌಲಭ್ಯ ಕೊಡುತ್ತಿದ್ದೇವೆ. ಪಂಚತಾರಾ ಸೌಲಭ್ಯ ಬೇಕಾದರೆ ಅವರು ಹೊಟೇಲ್‌ಗ‌ಳಲ್ಲಿ ತಮ್ಮ ಖರ್ಚಿನಲ್ಲಿ ಕ್ವಾರಂಟೈನ್‌ ಆಗಬೇಕು ಎಂದು ಹೇಳುತ್ತಿವೆ.

ಆಫ್ರಿಕ ಖಂಡದಲ್ಲಿ ದಕ್ಷಿಣ ಆಫ್ರಿಕ ಅಭಿವೃದ್ಧಿ ಹೊಂದಿದ ದೇಶವಾಗಿದ್ದು, ಉಳಿದ ದೇಶಗಳಿಂದ ಇಲ್ಲಿಗೆ ಅಧಿಕ ಮಂದಿ ವಲಸೆ ಬರುತ್ತಾರೆ. ಆದರೆ ಇಲ್ಲಿಯೇ 27,000ಕ್ಕೂ ಅಧಿಕ ಕೋವಿಡ್‌ ಸೋಂಕಿತರಿದ್ದಾರೆ. ಒಟ್ಟಾರೆ ಆಫ್ರಿಕದಲ್ಲಿ 1.3 ಲಕ್ಷ ಕೋವಿಡ್‌ ಪ್ರಕರಣಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next