ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ಗಿರಿನಗರ ಶಾಖೆಯಲ್ಲಿ ನಿರ್ಮಾಣ ಮಾಡುತ್ತಿದ್ದ ಕಟ್ಟಡದ ನಕ್ಷೆ ಮಂಜೂರಾತಿ ರದ್ದುಪಡಿಸಲು ಬಿಬಿಎಂಪಿಗೆ ಪತ್ರ ಬರೆಯಲು ಬಿಡಿಎ ಹಿಂದಿನ ಆಯುಕ್ತ ಶ್ಯಾಂ ಭಟ್ ಅವರ ಮೌಖೀಕ ಸೂಚನೆಯಿತ್ತು ಎಂಬುದಾಗಿ ಬಿಡಿಎ ನಿವೃತ್ತ ಕಾರ್ಯಕಾರಿ ಎಂಜಿನಿಯರ್ ರಾಜಗೋಪಾಲ್ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ನಕ್ಷೆ ರದ್ದುಪಡಿಸಿದ ಬಿಬಿಎಂಪಿ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಶುಕ್ರವಾರ ಏಕಸದಸ್ಯ ಪೀಠದ ಮುಂದೆ ರಾಜಗೋಪಾಲ್ ಅವರು ತಮಗೆ ಶ್ಯಾಂ ಭಟ್ ನೀಡಿದ್ದ ಮೌಖೀಕ ಸೂಚನೆ ನೀಡಿದ ಸಂಬಂಧ ಪ್ರಮಾಣಪತ್ರ ಸಲ್ಲಿಸಿದರು.
Advertisement
ವಿವಾದಿತ ನಿವೇಶನ ಹಂಚಿಕೆ ಸಂಬಂಧ ಮರು ಪರಿಶೀಲನೆ ತನಿಖೆ ನಡೆಸುವುದಾದರೆ ಅರ್ಜಿದಾರರಿಗೆ ಮೊದಲು ನೋಟಿಸ್ ನೀಡಬೇಕು. ಜತೆಗೆ ಈಗಾಗಲೇ ಕಟ್ಟಡ ಮಂಜೂರಾತಿ ರದ್ದು ಆದೇಶ ಹಿಂಪಡೆದಿರುವುದರಿಂದ ಈ ಅರ್ಜಿ ವಿಚಾರಣೆ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟ ನ್ಯಾಯಪೀಠ ಅರ್ಜಿ ಇತ್ಯರ್ಥಗೊಳಿಸಿತು.