ಶಾರ್ಜಾ: ಅಫ್ಘಾನಿಸ್ಥಾನ ತಂಡವು ಇದೇ ಮೊದಲ ಬಾರಿಗೆ ಪಾಕಿಸ್ಥಾನ ವಿರುದ್ಧ ಟಿ20 ಸರಣಿ ಗೆದ್ದುಕೊಂಡಿದೆ. ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡ ರಶೀದ್ ಖಾನ್ ಪಡೆಯು ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.
ಶಾರ್ಜಾ ಕ್ರಿಕೆಟ್ ಗ್ರೌಂಡ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 130 ರನ್ ಗಳಿಸಿದರೆ, ಅಫ್ಘಾನ್ ತಂಡವು ಒಂದು ಎಸೆತ ಬಾಕಿ ಇರುವಂತೆ ಕೇವಲ ಮೂರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಜಯ ಸಾಧಿಸಿತು.
ಇದನ್ನೂ ಓದಿ:“ನೀವು ಯಾರನ್ನಾದರೂ ಡೇಟ್ ಮಾಡಿ”.. ಸಮಂತಾಗೆ ಅಭಿಮಾನಿಯ ಮನವಿ; ನಟಿಯ ಪ್ರತಿಕ್ರಿಯೆ ವೈರಲ್
ಬ್ಯಾಟಿಂಗ್ ಆರಂಭಿಸಿದ ಪಾಕ್ ಕೇವಲ 20 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಇಮಾದ್ ವಸೀಂ 57 ಎಸೆತಗಳಲ್ಲಿ 64 ರನ್ ಗಳಿಸಿ ತಂಡವನ್ನು ಆಧರಿಸಿದರು. ನಾಯಕ ಶದಾಬ್ 32 ರನ್ ಮಾಡಿದರು. ಅಫ್ಘಾನ್ ಪರ ಫಾರೂಕಿ ಎರಡು ವಿಕೆಟ್ ಕಿತ್ತರೆ, ನವೀನ್ ಉಲ್ ಹಕ್, ರಶೀದ್ ಮತ್ತು ಕರೀಮ್ ಜನತ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಅಫ್ಘಾನ್ ತಂಡಕ್ಕೆ ಆರಂಭಿಕ ಆಟಗಾರ ಗುರ್ಬಾಜ್ ಬಲ ತುಂಬಿದರು. ಗುರ್ಬಾಜ್ 44 ರನ್ ಗಳಿಸಿದರೆ, ಇಬ್ರಾಹಿಂ ಜದ್ರಾನ್ 38 ರನ್ ಮತ್ತು ನಜಿಬುಲ್ಲಾ ಜದ್ರಾನ್ 23 ರನ್ ಮಾಡಿದರು. ಒಂದು ಎಸೆತ ಬಾಕಿ ಇರುವಂತೆ ಅಫ್ಘಾನ್ ಗೆಲುವು ದಾಖಲಿಸಿ ಮೊದಲ ಸರಣಿ ಜಯ ಸಾಧಿಸಿತು.