ಸೌತಂಪ್ಟನ್: ಟೀಂ ಇಂಡಿಯಾ ವಿರುದ್ಧ ಸೋತರೂ ತನ್ನ ಸಂಘಟಿತ ಪ್ರದರ್ಶನದಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕ್ರಿಕೆಟ್ ಶಿಶು ಅಫ್ಘಾನ್ ಇಂದು ಬಾಂಗ್ಲಾ ದೇಶ ತಂಡವನ್ನು ಎದುರಿಸಲಿದೆ. ಇಲ್ಲಿನ ರೋಸ್ ಬೌಲ್ ಅಂಗಳದಲ್ಲಿ ಎರಡು ಏಷಿಯನ್ ತಂಡಗಳು ಸೆಣಸಾಡಲಿವೆ.
ನಮ್ಮ ತಂಡದಲ್ಲಿ ವಿಶ್ವದರ್ಜೆಯ ಸ್ಪಿನ್ನರ್ ಗಳಿದ್ದಾರೆ. ಭಾರತ ವಿಶ್ವದ ಶ್ರೇಷ್ಠ ಬ್ಯಾಟಿಂಗ್ ಹೊಂದಿದೆ. ಭಾರತದ ವಿರುದ್ದದ ಪ್ರದರ್ಶನ ನಮಗೆ ಆತ್ಮವಿಶ್ವಾಸ ತುಂಬಿದೆ. ಹಾಗಾಗಿ ನಮಗೆ ಬಾಂಗ್ಲಾ ವಿರುದ್ದ ಉತ್ತಮವಾಗಿ ಆಡುವ ವಿಶ್ವಾಸವಿದೆ ಎಂದು ಅಫ್ಘಾನ್ ನಾಯಕ ಗುಲ್ಬದಿನ್ ನೈಬ್ ಹೇಳಿಕೆ ನೀಡಿದ್ದಾರೆ.
ಮೊದಲ ಕೆಲವು ಪಂದ್ಯಗಳಲ್ಲಿ ನಾವು ವಾತಾವರಣಕ್ಕೆ ಬೇಕಾದ ಹಾಗೆ ಹೊಂದಿಕೊಳ್ಳಲಾಗಲಿಲ್ಲ. ಆದರೆ ಈ ಮೈದಾನದಲ್ಲಿ ನಮಗೆ ಏಷ್ಯಾ ರೀತಿಯ ವಾತಾವರಣವಿದೆ. ಹಾಗಾಗಿ ನಮ್ಮ ಸ್ಪಿನ್ನರ್ ಗಳು ಕಳೆದ ಪಂದ್ಯದಲ್ಲಿ ಯಶಸ್ವಿಯಾದರು. ಒಂದು ವೇಳೆ ಪಿಚ್ ನ ಸಹಕಾರ ಸಿಕ್ಕಿದರೆ ನಮ್ಮ ಸ್ಪಿನ್ನರ್ ಗಳ ಎದುರು ಆಡುವುದು ಯಾವುದೇ ತಂಡಕ್ಕೂ ಕಷ್ಟವಾಗಬಹುದು ಎಂದು ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮೊದಲು ನೈಬ್ ವಿಶ್ವಾಸ ವ್ಯಕ್ತಪಡಿಸಿದರು.
ಟಿ ಟ್ವೆಂಟಿಯ ನಂ 1 ಬೌಲರ್ ರಶೀದ್ ಖಾನ್, ಮುಜಿಬ್ ಉರ್ ರಹಮಾನ್ ಮತ್ತು ಆಲ್ ರೌಂಡರ್ ಮೊಹಮ್ಮದ್ ನಬಿ ಅಫ್ಘಾನ್ ನ ಪ್ರಮುಖ ಸ್ಪಿನ್ ಅಸ್ತ್ರ ಗಳು. ಬಾಂಗ್ಲಾದೇಶ ಕೂಡಾ ಈ ವಿಶ್ವಕಪ್ ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದೆ. ಶಕೀಬ್, ಲಿಟ್ಟನ್ ದಾಸ್, ವಿಕೆಟ್ ಕೀಪರ್ ರಹೀಂ, ತಮೀಮ್ ಇಕ್ಬಾಲ್ ಉತ್ತಮ ಫಾರ್ಮ್ ನಲ್ಲಿದ್ದು ಅಫ್ಘಾನ್ ಸವಾಲನ್ನು ಎದುರಿಸಲು ಸಿದ್ದವಾಗಿದೆ.
ಈ ವಿಶ್ವಕಪ್ ಕೂಟದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಅಫ್ಘಾನಿಸ್ಥಾನ ಆರು ಪಂದ್ಯವಾಡಿದ್ದು ಎಲ್ಲಾ ಪಂದ್ಯಗಳಲ್ಲಿ ಸೋಲನುಭವಿಸಿದೆ. ಬಾಂಗ್ಲಾ ಕೂಡಾ ಆರು ಪಂದ್ಯ ಆಡಿದ್ದು ಎರಡು ಪಂದ್ಯಗಳಲ್ಲಿ ಗೆದ್ದು ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಒಟ್ಟು ಐದು ಅಂಕ ಹೊಂದಿರುವ ಬಾಂಗ್ಲಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.