ಕಾಬೂಲ್:ಉತ್ತರ ಅಫ್ಘಾನಿಸ್ತಾನದಲ್ಲಿನ ಗಣಿ ಕಾರ್ಮಿಕರ ಗುಂಪಿನ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ ಪರಿಣಾಮ ಹತ್ತು ಮಂದಿ ಸಾವನ್ನಪ್ಪಿದ್ದು, 14 ಕಾರ್ಮಿಕರು ಗಾಯಗೊಂಡಿರುವುದಾಗಿ ಪೊಲೀಸರು ಬುಧವಾರ(ಜೂನ್ 09) ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್: ಬೆಲೆಸಿಗದ ಬಾಳೆ ಉಚಿತ ಹಂಚಿಕೆ: ಬೆಳೆಗೆ ಬೆಂಕಿಯಿಟ್ಟ ರೈತ
ರಾಜಧಾನಿ ಕಾಬೂಲ್ ನ ಬಾಘ್ಲಾನ್ ಎ ಮರ್ಕಾಝಿ ಜಿಲ್ಲೆಯ ಬಾಘ್ಲಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಪಟ್ಟಣವಾದ ಪುಲ್ ಎ ಖುಮ್ರಿಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ, ಆದರೆ ಅಫ್ಘಾನ್ ಆಂತರಿಕ ಸಚಿವಾಲಯದ ವಕ್ತಾರ ತಾರೀಖ್ ಅರಿಯನ್ ಸುದ್ದಿಗಾರರ ಜತೆ ಮಾತನಾಡುತ್ತ, ಘಟನೆಗೆ ತಾಲಿಬಾನ್ ಹೊಣೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ತಾಲಿಬಾನ್ ಉಗ್ರರು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಆವರಣದೊಳಕ್ಕೆ ಬಂದು ಗುಂಡಿನ ದಾಳಿ ನಡೆಸಿರುವುದಾಗಿ ತಾರೀಖ್ ಮಾಹಿತಿ ನೀಡಿದ್ದಾರೆ. ಆದರೆ ತಾಲಿಬಾನ್ ಉಗ್ರ ಸಂಘಟನೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.