Advertisement

ಅನಿಶ್ಚಿತತೆಯ ಗೂಡಾದ ಅಫ್ಘನ್ನರ ಬದುಕು: ಶವಗಳ ಮೇಲೂ ಅತ್ಯಾಚಾರ!

10:52 AM Aug 24, 2021 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನವು ತಾಲಿಬಾನ್‌ ಉಗ್ರರ ವಶಕ್ಕೆ ಬಂದು ಒಂದು ವಾರ ತುಂಬುತ್ತಲೇ ಅಲ್ಲಿನ ಜನತೆಗೆ ಅಸ್ಥಿರತೆ ಹಾಗೂ ಅರಾಜಕತೆಯ ಅನುಭವ ಆಗತೊಡಗಿದೆ. ಬಹುತೇಕ ಆಫ‌^ನ್ನರು ಉದ್ಯೋಗ ಕಳೆದುಕೊಂಡಿದ್ದಾರೆ, ಬ್ಯಾಂಕುಗಳು ಇನ್ನೂ ತೆರೆದಿಲ್ಲ, ಆಹಾರ ಸೇರಿದಂತೆ ಅಗತ್ಯ ವಸ್ತುಗಳ ದರ ಗಗನಕ್ಕೇರುತ್ತಿದೆ.

Advertisement

ಸಾವಿರಾರು ಮಂದಿ ಇನ್ನೂ ಕಾಬೂಲ್‌ ವಿಮಾನ ನಿಲ್ದಾಣದಲ್ಲೇ ಇದ್ದು, ದೇಶ ಬಿಟ್ಟು ಹೋಗಲು ಕಾಯುತ್ತಿದ್ದಾರೆ. ಈವರೆಗೆ ಹರಿದುಬರುತ್ತಿದ್ದ ಅಂತಾರಾಷ್ಟ್ರೀಯ ನೆರವು ಕೂಡ ಸ್ಥಗಿತಗೊಂಡಿದ್ದು, ನಾಗರಿಕರ ಅನಿಶ್ಚಿತತೆಯ ಬೆಂಕಿಗೆ ತುಪ್ಪ ಸುರಿಯುತ್ತಿದೆ.

ನಾಗರಿಕರು ಒಬ್ಬೊಬ್ಬರಾಗಿ ತಮ್ಮ ಆಕ್ರೋಶ, ಹತಾಶೆಯನ್ನು ಹೊರಹಾಕುತ್ತಿದ್ದಾರೆ. “ನನಗೆ ತಿಂಗಳಿಗೆ 260 ಡಾಲರ್‌ ವೇತನ ಬರುತ್ತಿತ್ತು. ಪತ್ನಿ ಮತ್ತು ನಾಲ್ವರು ಮಕ್ಕಳಿದ್ದಾರೆ. ನನ್ನ ಸುರಕ್ಷತೆ, ನಮ್ಮ ಬದುಕು, ಹೆಂಡತಿ-ಮಕ್ಕಳ ಹೊಟ್ಟೆತುಂಬಿಸುವುದು… ಯಾವುದಕ್ಕೆ ಆದ್ಯತೆ ಕೊಡಬೇಕೆಂದೇ ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ ಈಗ ತಲೆಮರೆಸಿಕೊಂಡಿರುವ ಅಫ್ಘಾನ್‌ ಪೊಲೀಸ್‌ ಅಧಿಕಾರಿ.

ಕೆಳಮಟ್ಟದ ಹುದ್ದೆಯಲ್ಲಿದ್ದ ಸರಕಾರಿ ನೌಕರರ ಸ್ಥಿತಿಯೂ ಹೇಳತೀರದಂತಾಗಿದೆ. “ಕಳೆದ 2 ತಿಂಗಳಿಂದಲೂ ವೇತನ ನೀಡಿರಲಿಲ್ಲ. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಬಾಡಿಗೆ ಕಟ್ಟದೇ 3 ತಿಂಗಳಾಯಿತು’ ಎಂದು ಸರಕಾರಿ ನೌಕರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

“ನನ್ನ ಪತ್ನಿಯ ಕಿವಿಯೋಲೆ ಮತ್ತು ಉಂಗುರಗಳನ್ನು ಮಾರಾಟ ಮಾಡಿ ಹಣ ತರೋಣ ಎಂದು ಹೊರಗೆ ಹೋಗಿದ್ದೆ. ಚಿನ್ನದಂಗಡಿಗಳು ಇನ್ನೂ ಬಾಗಿಲು ತೆರೆದಿಲ್ಲ. ನಾನೀಗ ಅಸಹಾಯಕ’ ಎಂದು ಮತ್ತೂಬ್ಬರು ಕಣ್ಣೀರು ಹಾಕಿದ್ದಾರೆ.

Advertisement

ದರ ಏರಿಕೆಯ ಬಿಸಿ: ಮತ್ತೂಂದೆಡೆ, ಹಿಟ್ಟು, ಅಡುಗೆಎಣ್ಣೆ, ಅಕ್ಕಿ ಮುಂತಾದ ಆಹಾರವಸ್ತುಗಳ ದರ ಏಕಾಏಕಿ ಶೇ.10-20ರಷ್ಟು ಏರಿಕೆಯಾಗಿದೆ. ಬ್ಯಾಂಕ್‌ಲ್ಲಿರುವ ಹಣ ತಂದು ಆಹಾರ ತರೋಣವೆಂದರೆ ಬ್ಯಾಂಕ್‌ಗಳೂ ಓಪನ್‌ ಆಗಿಲ್ಲ. ಇವೆಲ್ಲವೂ ನಾಗರಿಕರ ಬದುಕನ್ನು ದುಸ್ತರಗೊಳಿಸಿದೆ.

ಗುಂಡಿನ ದಾಳಿಗೆ ಒಬ್ಬರು ಬಲಿ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸೋಮವಾರ ಕಾಬೂಲ್‌ ವಿಮಾನನಿಲ್ದಾಣದಲ್ಲಿ ಅಪರಿಚಿತರು ಏಕಾಏಕಿ ನಡೆಸಿದ ಗುಂಡಿನ ದಾಳಿಗೆ ಅಫ್ಘಾನ್‌ನ ಒಬ್ಬ ಸೈನಿಕ ಅಸುನೀಗಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಯಾವ ಕಾರಣಕ್ಕೆ, ಯಾರು ದಾಳಿ ನಡೆಸಿದರು ಎಂಬುದು ತಿಳಿದುಬಂದಿಲ್ಲ.

ತಾಲಿಬಾನ್‌ ಪರ ರ್ಯಾಲಿ :

ಉಗ್ರ ಸಂಘಟನೆಗಳಿಗೆ ನಾವು ಬೆಂಬಲಿಸಲ್ಲ ಎಂದು ಹೇಳುತ್ತಿರುವ ಪಾಕಿಸ್ಥಾನದ ಬಣ್ಣ ಪದೇ ಪದೆ ಬಯಲಾಗುತ್ತಲೇ ಇದೆ. ಅದಕ್ಕೆ ಮತ್ತೂಂದು ಉದಾಹರಣೆ ಎಂಬಂತೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸೋಮವಾರ ಲಷ್ಕರ್‌, ಜೈಶ್‌ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ಸದಸ್ಯರು ತಾಲಿಬಾನ್‌ ಪರ ರ್ಯಾಲಿ ನಡೆಸಿದ್ದಾರೆ. ಜತೆಗೆ, ಗಾಳಿಯಲ್ಲಿ ಗುಂಡು ಹಾರಿಸುತ್ತಾ ಸಂಭ್ರಮಾಚರಣೆಯನ್ನೂ ನಡೆಸಿದ್ದಾರೆ. ರ್ಯಾಲಿಯಲ್ಲಿ ಕೆಲವರು ತಾಲಿಬಾನ್‌ ನಾಯಕ ಮುಲ್ಲಾ ಬರಾದಾರ್‌ ಮತ್ತು ಐಎಸ್‌ಐ ಮುಖ್ಯಸ್ಥ ಫೈಜ್‌ ಹಮೀದ್‌ನ ಫೋಟೋಗಳನ್ನೂ ಹಿಡಿದುಕೊಂಡಿದ್ದರು.

ಅಫ್ಘಾನ್‌ನಲ್ಲಿ ಪಾಕ್‌ ನಾಗರಿಕನ ಐಡಿ! :

ಅಫ್ಘಾನಿಸ್ಥಾನದಲ್ಲಿ ಇನ್ನೂ ತಾಲಿಬಾನಿಗಳ ಕೈವಶವಾಗದ ಹಾಗೂ ತಾಲಿಬಾನ್‌ ವಿರುದ್ಧ ಪ್ರತಿರೋಧ ಒಡ್ಡುತ್ತಿರುವ ಪ್ರದೇಶವೊಂದರಲ್ಲಿ ಪಾಕಿಸ್ಥಾನಿ ನಾಗಕರಿಕನ ಗುರುತಿನ ಪತ್ರವೊಂದು ಸಿಕ್ಕಿದೆ. ಅದನ್ನು ಅಲ್ಲಿ ಹೋರಾಡುತ್ತಿರುವ ನಾರ್ದರ್‌ ಅಲಯನ್ಸ್‌ ಹಂಚಿಕೊಂಡಿದೆ. ಇದರಿಂದಾಗಿ ತಾಲಿಬಾನಿಗಳಿಗೆ ಪಾಕಿಸ್ಥಾನವು ಬೆನ್ನೆಲುಬಾಗಿ ನಿಂತಿದೆ ಎನ್ನುವುದಕ್ಕೆ ಮತ್ತೂಂದು ಸಾಕ್ಷ್ಯ ಸಿಕ್ಕಂತಾಗಿದೆ.

ಶವಗಳ ಮೇಲೂ ಅತ್ಯಾಚಾರ!
“ತಾಲಿಬಾನಿಗಳು ಹೆಣಗಳನ್ನೂ ಬಿಡುವುದಿಲ್ಲ. ಅವುಗಳ ಮೇಲೂ ಅತ್ಯಾಚಾರ ಎಸಗುತ್ತಾರೆ…’ ಇಂಥದ್ದೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದು ಅಫ್ಘನ್ ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಭಾರತಕ್ಕೆ ಬಂದಿರುವ ಮುಸ್ಕಾನ್‌. “ತಾಲಿಬಾನ್‌ ಉಗ್ರರಿಗೆ ಹೆಣ್ಣು ಜೀವಂತ ಇದ್ದಾಳೋ ಇಲ್ಲವೋ ಎನ್ನುವುದು ಒಂದು ವಿಚಾರವೇ ಆಗುವುದಿಲ್ಲ.ಈರೀತಿ ಶವಗಳ ಮೇಲೆ ಅತ್ಯಾಚಾರ ಮಾಡುವುದಕ್ಕೆ ನೆಕ್ರೋಫಿಲಿಯಾ ಎಂದು ಕರೆಯುತ್ತಾರೆ.
ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಕೆಲಸ ಬಿಡಬೇಕೆಂದು ಸಾಕಷ್ಟು ಬೆದರಿಕೆ ಬಂದಿದ್ದವು.ಆ ಹಿನ್ನೆಲೆಯಲ್ಲಿ ನಾನು ಆ ದೇಶ ಬಿಟ್ಟು ಬಂದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಮತ್ತೆ 146 ಮಂದಿ ಸ್ವದೇಶಕ್ಕೆ :

ಸೋಮವಾರ ಮತ್ತೆ 146 ಭಾರತೀಯರು ಸ್ವದೇಶಕ್ಕೆ ಆಗಮಿಸಿದ್ದಾರೆ. ಅಮೆರಿಕದ ವಿಮಾನದ ಮೂಲಕ ಅಫ್ಘಾನ್‌ನಿಂದ ಕತಾರ್‌ನ ದೋಹಾಗೆ ಬಂದಿಳಿದಿದ್ದ ಭಾರತೀಯರನ್ನು, ನಾಲ್ಕು ಪ್ರತ್ಯೇಕ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ. ಇದೇ ವೇಳೆ, “ಅಫ್ಘಾನ್‌ ನಾಗರಿಕರ ಜತೆಗೆ ನಾವಿದ್ದೇವೆ’ ಎಂದು ಧೈರ್ಯ ತುಂಬುವ ನಿಟ್ಟಿನಲ್ಲಿ ಸೋಮವಾರ ವಿವಿಧ ಸಂಘ ಸಂಸ್ಥೆಗಳು ದೆಹಲಿಯಲ್ಲಿ ಮೆರವಣಿಗೆ ನಡೆಸಿವೆ. ಆಫ‌^ನ್ನರ ಹಕ್ಕುಗಳ ರಕ್ಷಣೆಗೆ ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬರಬೇಕು ಎಂದೂ ಮನವಿ ಮಾಡಲಾಗಿದೆ.

ಅಫ್ಘಾನ್‌ನಿಂದ ಅಮೆರಿಕ ಪಡೆ ಯನ್ನು ವಾಪಸ್‌ ಪಡೆದಿದ್ದು ತರ್ಕ ಬದ್ಧ, ಸಮರ್ಪಕ ಹಾಗೂ ಸರಿಯಾದ ನಿರ್ಧಾರ ಎಂದು ಇತಿಹಾಸದಲ್ಲಿ ದಾಖಲಾಗಲಿದೆ. ಈವರೆಗೆ ತಾಲಿಬಾನಿಗರು ಅಮೆರಿಕದ ಪಡೆಗಳಿಗೆ ಯಾವುದೇ ತೊಂದರೆ ಕೊಟ್ಟಿಲ್ಲ. ಕೊಡುವುದೂ ಇಲ್ಲ ಎಂಬ ನಂಬಿಕೆಯಿದೆ.-ಜೋ ಬೈಡೆನ್‌, ಅಮೆರಿಕ ಅಧ್ಯಕ್ಷ

ಅಫ್ಘಾನ್‌ನಲ್ಲಿ ಎದುರಾಗಿರುವ ಸಮಸ್ಯೆಗೆ ಮೂಲ ಕಾರಣ ಅಮೆರಿಕ. ಅದು ಹೀಗೆ ಓಡಿಹೋಗಬಾರದು. ಅಮೆರಿಕ ಮಾನವೀಯ ನೆಲೆಯಲ್ಲಿ ಮತ್ತೆ ಅಫ್ಘಾನ್‌ನ ಜವಾಬ್ದಾರಿ ಹೊತ್ತು ಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ ಮತ್ತು ಆ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆ ಎಂದು ನಂಬಿದ್ದೇವೆ.-ವಾಂಗ್‌ ವೆನ್‌ಬಿನ್‌, ಚೀನ ವಿದೇಶಾಂಗ ಸಚಿವಾಲಯದ ವಕ್ತಾರ

ದೇಶವನ್ನು ತಾಲಿಬಾನ್‌ ವಶಕ್ಕೆ ಪಡೆದಾಗ ರಕ್ತಪಾತ ಆಗದಂತೆ ತಡೆಯುವುದು ನನ್ನ ಉದ್ದೇಶವಾಗಿತ್ತು. ಹಾಗಾಗಿ, ನಾನು ಆ ಪ್ರಕ್ರಿಯೆಯನ್ನು ಒಪ್ಪಿಕೊಂಡೆ. ಹಾಗಂತ ನಾನೇನೂ ತಾಲಿಬಾನ್‌ಗೆ ಸೇರ್ಪಡೆಯಾಗಿಲ್ಲ.-ಹಶ್ಮತ್‌ ಘನಿ, ಅಫ್ಘಾನ್‌ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸಹೋದರ

ಧಾರ್ಮಿಕ ಮೂಲಭೂತವಾದದ ಹೆಸರಲ್ಲಿ ನಡೆಯುವ ಕೋಮು ದ್ವೇಷವು ಜನರನ್ನು ಹಾಗೂ ದೇಶಗಳನ್ನೇ ಸುಟ್ಟುಹಾಕುತ್ತವೆ ಎನ್ನುವುದಕ್ಕೆ ಅಫ್ಘಾನಿಸ್ಥಾನವೇ ಸಾಕ್ಷಿ. ನಾವೆಲ್ಲರೂ ಜಾತಿ- ಧರ್ಮದ ಆಚೆಗೆ ಮಾನವತೆಯನ್ನು ಎತ್ತಿ ಹಿಡಿಯಬೇಕು.-ಪಿಣರಾಯಿ ವಿಜಯನ್‌, ಕೇರಳ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next