Advertisement

ICC World Cup 2023: ಪಾಕ್ ಗಿಂತ ಅಫ್ಘಾನ್ ಪ್ರದರ್ಶನ ಉತ್ತಮವಾಗಿದೆ: ಶೋಯೆಬ್ ಮಲಿಕ್

12:23 PM Nov 11, 2023 | Team Udayavani |

ಮುಂಬೈ: ಸದ್ಯ ನಡೆಯುತ್ತಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಪಾಕಿಸ್ತಾನ ತಂಡವು ಆಡಿದ ಎಂಟು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ನಾಲ್ಕರಲ್ಲಿ ಸೋಲನುಭವಿಸಿದೆ. ಸೆಮಿ ಫೈನಲ್ ರೇಸ್ ನಿಂದ ಸಂಪೂರ್ಣವಾಗಿ ಹೊರ ಬೀಳದಿದ್ದರೂ, ಪವಾಡದ ಹೊರತಾಗಿ ಉಪಾಂತ್ಯ ಸುತ್ತ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿದೆ. ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ತಂಡದ ಪ್ರದರ್ಶನದ ಬಗ್ಗೆ ಟೀಕೆ ಮಾಡಿದ್ದು, ಈ ಬಾರಿಯ ವಿಶ್ವಕಪ್ ನಲ್ಲಿ ಪಾಕ್ ಗಿಂತ ಅಫ್ಘಾನಿಸ್ತಾನದ ಪ್ರದರ್ಶನ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.

Advertisement

ಪಾಕಿಸ್ತಾನದ ಎ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಮಾತನಾಡಿದ ಮಲಿಕ್, ” ನನ್ನ ಅಭಿಪ್ರಾಯದಲ್ಲಿ, ಅಫ್ಘಾನಿಸ್ತಾನ ನಮಗಿಂತ ಉತ್ತಮವಾಗಿ ಕ್ರಿಕೆಟ್ ಆಡಿದೆ. ನಾವು ಕೇವಲ ಈ ವಿಶ್ವಕಪ್‌ ಬಗ್ಗೆ ಮಾತನಾಡುವುದಾದರೆ ಅಫ್ಘಾನಿಸ್ತಾನ ನಮಗಿಂತ ಉತ್ತಮ ಕ್ರಿಕೆಟ್ ಆಡಿದೆ” ಎಂದು ಮಲಿಕ್ ಹೇಳಿದರು.

ಮಲಿಕ್ ಮಾತಿಗೆ ಸಹಮತ ವ್ಯಕ್ತಪಡಿಸಿದ ಮಾಜಿ ವೇಗಿ ವಾಸಿಂ ಅಕ್ರಮ್, “ಆಫ್ಘನ್ನರು ಬಲಶಾಲಿಯಾಗಿ ಕಾಣುತ್ತಿದ್ದಾರೆ. ಬಹುಶಃ, ನಮ್ಮ ಹುಡುಗರು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದರಿಂದ ಸುಸ್ತಾಗಿ ಕಾಣುತ್ತಿದ್ದರು. ಅಫ್ಘಾನಿಸ್ತಾನದ ಕ್ರಿಕೆಟಿಗರು ಪಾಕಿಸ್ತಾನಕ್ಕಿಂತ ಉತ್ತಮವಾಗಿ ಕಾಣುತ್ತಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ” ಎಂದಿದ್ದಾರೆ.

2015 ಮತ್ತು 2019ರ ವಿಶ್ವಕಪ್ ನಲ್ಲಿ ಭಾಗವಹಿಸಿದ್ದ ಅಫ್ಘನಿಸ್ಥಾನ ತಂಡವು ಎರಡು ವಿಶ್ವಕಪ್ ಸೇರಿ ಒಂದು ಪಂದ್ಯ ಗೆಲುವು ಸಾಧಿಸಿತ್ತು. ಆದರೆ ಈ ಬಾರಿಯ ಕೂಟದಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದೆ. ಅಲ್ಲದೆ ಶ್ರೀಲಂಕಾ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಂತಹ ಬಲಿಷ್ಠ ತಂಡಗಳನ್ನು ಮಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next