Advertisement

World Cup; ಕಾಂಗರೂಗಳನ್ನು ಕಾಡಲು ಕಾತರಗೊಂಡಿದೆ ಅಫ್ಘಾನಿಸ್ಥಾನ

11:59 PM Nov 06, 2023 | Team Udayavani |

ಮುಂಬಯಿ: ಅಚ್ಚರಿಯ ಹಾಗೂ ಅಪಾಯಕಾರಿ ತಂಡವಾದ ಅಫ್ಘಾನಿಸ್ಥಾನ ಹಲವು ಏರುಪೇರು ಫ‌ಲಿತಾಂಶ ದಾಖಲಿಸಿ ಸೆಮಿಫೈನಲ್‌ ರೇಸ್‌ನಲ್ಲಿ ಉಳಿದದ್ದು ಈ ವಿಶ್ವಕಪ್‌ನ ವಿಶೇಷಗಳಲ್ಲೊಂದು. ಈತನಕ ಹಶ್ಮತುಲ್ಲ ಶಾಹಿದಿ ಪಡೆಯ ಹಾದಿ ಸುಗಮವಾಗಿಯೇ ಸಾಗಿ ಬಂದಿದೆ. ಆದರೆ ನಾಕೌಟ್‌ ತಲುಪಲು ಮುಂದಿನೆರಡು ಕಠಿನ ಹರ್ಡಲ್ಸ್‌ ದಾಟಲೇಬೇಕಿದೆ.

Advertisement

ಇದರಲ್ಲೊಂದು ಸವಾಲು ಮಂಗಳವಾರ ಆಸ್ಟ್ರೇಲಿಯ ವಿರುದ್ಧ ಮುಂಬಯಿಯಲ್ಲಿ ಎದುರಾಗಲಿದೆ. ಕೊನೆಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಬೇಕಿದೆ. ಇವೆರಡನ್ನೂ ಜಯಿಸಿದರೆ ಅಫ್ಘಾನಿಸ್ಥಾನಕ್ಕೆ 4ನೇ ಸ್ಥಾನದೊಂದಿಗೆ ಸೆಮಿಫೈನಲ್‌ ಸಾಧ್ಯ ಎಂಬುದು ಸದ್ಯದ ಲೆಕ್ಕಾಚಾರ. ಅಕಸ್ಮಾತ್‌ ಮಂಗಳವಾರದ ಮೇಲಾಟದಲ್ಲಿ ಆಸ್ಟ್ರೇಲಿಯ ಜಯಿಸಿದರೆ ಪ್ಯಾಟ್‌ ಕಮಿನ್ಸ್‌ ಪಡೆಯ ಸೆಮಿಫೈನಲ್‌ ಪಕ್ಕಾ ಆಗಲಿದೆ.

ನ್ಯೂಜಿಲ್ಯಾಂಡ್‌, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ತಲಾ 8 ಅಂಕಗಳನ್ನು ಹೊಂದಿವೆ. ರನ್‌ರೇಟ್‌ನಲ್ಲಿ ಈ ತಂಡಗಳು ಅಫ್ಘಾನ್‌ಗಿಂತ ಮೇಲಿವೆ. ಆದರೆ ಕಿವೀಸ್‌ ಮತ್ತು ಪಾಕ್‌ ಮುಂದೆ ಕೇವಲ ಒಂದು ಪಂದ್ಯವಷ್ಟೇ ಇದೆ. ಆಸ್ಟ್ರೇಲಿಯ ಕೂಡ 2 ಪಂದ್ಯಗಳನ್ನು ಆಡಬೇಕಿದೆ. ಕಾಂಗರೂಗಳ ಕೊನೆಯ ಎದುರಾಳಿ ಬಾಂಗ್ಲಾದೇಶ. ಹೀಗಾಗಿ ಆಸ್ಟ್ರೇಲಿಯಕ್ಕೆ ನೇರ ಬೆದರಿಕೆಯೊಡ್ಡಿರುವ ತಂಡವೆಂದರೆ ಅಫ್ಘಾನಿಸ್ಥಾನ ಮಾತ್ರ. ಕಳೆದ 5 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವುದು ಅಫ್ಘಾನ್‌ ಹೆಗ್ಗಳಿಕೆ.

ವಾಂಖೇಡೆ; ಬ್ಯಾಟಿಂಗ್‌ ಸ್ವರ್ಗ
ಮುಂಬಯಿಯ ವಾಂಖೇಡೆ ಸ್ಟೇಡಿಯಂ ಬ್ಯಾಟಿಂಗ್‌ ಸ್ವರ್ಗ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ಒಂದು ಸಂಗತಿಯಾದರೆ, ಎರಡೂ ತಂಡಗಳ ಬೌಲಿಂಗ್‌ ಹರಿತವಾಗಿದೆ ಎಂಬುದು ಗಮನಿಸಬೇಕಾದ ಇನ್ನೊಂದು ಅಂಶ. ಅಫ್ಘಾನ್‌ ಸ್ಪಿನ್‌ ಬ್ಯಾಟರಿ ಸದಾ ಚಾರ್ಜ್‌ ಆಗಿಯೇ ಇದೆ. ಒಂದು ವೇಳೆ ರಶೀದ್‌ ಖಾನ್‌, ಮುಜೀಬ್‌ ಉರ್‌ ರೆಹಮಾನ್‌, ಮೊಹಮ್ಮದ್‌ ನಬಿ ಕಾಂಗರೂ ಪಾಲಿಗೆ ಸಿಂಹಸ್ವಪ್ನರಾಗಿ ಗೋಚರಿಸಿದ್ದೇ ಆದಲ್ಲಿ ಈ ಪಂದ್ಯ ಅತ್ಯಂತ ರೋಚಕವಾಗಿ ಸಾಗುವುದು ಖಂಡಿತ.

ಅಫ್ಘಾನಿಸ್ಥಾನ ಬ್ಯಾಟಿಂಗ್‌ ವಿಭಾಗ ಕೂಡ ಬಲಿಷ್ಠವಾಗಿದೆ. ಮುಖ್ಯವಾಗಿ ನಿಂತು ಆಡುವ, ದೊಡ್ಡ ಜತೆಯಾಟ ನಿಭಾಯಿಸುವ ಜಾಣ್ಮೆ ಇವರಿಗೆ ಸಿದ್ಧಿಸಿದೆ. ಇದಕ್ಕೆ ಪಾಕಿಸ್ಥಾನ ವಿರುದ್ಧದ ಯಶಸ್ವಿ ಚೇಸಿಂಗೇ ಸಾಕ್ಷಿ. ಅದು 8 ವಿಕೆಟ್‌ಗಳ ಅಮೋಘ ಜಯವಾಗಿತ್ತು. ಇಬ್ರಾಹಿಂ ಜದ್ರಾನ್‌ (232 ರನ್‌), ರೆಹಮತ್‌ ಶಾ (264 ರನ್‌), ಶಾಹಿದಿ (282 ರನ್‌), ಒಮರ್‌ಜಾಯ್‌ (234 ರನ್‌) ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಆರಂಭಕಾರ ರೆಹಮಾನುಲ್ಲ ಗುರ್ಬಜ್‌234 ರನ್‌ ಬಾರಿಸಿದರೂ ಕಳೆದ ಕೆಲವು ಪಂದ್ಯಗಳಲ್ಲಿ ವೈಫ‌ಲ್ಯ ಕಾಣುತ್ತ ಬಂದಿರುವುದು ಚಿಂತೆಯ ಸಂಗತಿ.
ಏಕದಿನ ಇತಿಹಾಸವನ್ನು ಗಮನಿಸುವುದಾರೆ, ಆಸ್ಟ್ರೇಲಿಯ ವಿರುದ್ಧ ಆಡಿದ ಮೂರೂ ಏಕದಿನ ಪಂದ್ಯಗಳಲ್ಲಿ ಅಫ್ಘಾನಿಸ್ಥಾನ ಸೋಲನುಭವಿಸಿದೆ. ಇದರಲ್ಲಿ 2 ಸೋಲು ವಿಶ್ವಕಪ್‌ನಲ್ಲಿ ಎದುರಾಗಿದೆ. 2015 ಮತ್ತು 2019ರಲ್ಲಿ ಅಫ್ಘಾನ್‌ ಪಡೆಯನ್ನು ಆಸೀಸ್‌ ಬಗ್ಗುಬಡಿದಿತ್ತು.

Advertisement

ಶಕ್ತಿ ವೃದ್ಧಿಸಿಕೊಂಡ ಕಾಂಗರೂ
5 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಹಂತ ಹಂತವಾಗಿ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡು ಬರುತ್ತಲೇ ಇದೆ. ಆರಂಭದಲ್ಲೊಮ್ಮೆ ತೀರಾ ಕೆಳ ಹಂತದಲ್ಲಿದ್ದ ಕಾಂಗರೂ ಪಡೆ ಈಗ 3ನೇ ಸ್ಥಾನಕ್ಕೆ ಲಗ್ಗೆ ಇರಿಸಿದೆ. ಸದ್ಯ ಕಮಿನ್ಸ್‌ ಪಡೆಯದ್ದು ಚಾಂಪಿಯನ್ನರ ಆಟ. ಇವರನ್ನು ತಡೆಯುವುದು ಅಷ್ಟು ಸುಲಭವಲ್ಲ. ಮಿಚೆಲ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅನುಪಸ್ಥಿತಿ ಕೂಡ ಕಾಂಗರೂಗಳನ್ನು ಕಾಡಿಲ್ಲ. ಈ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್‌ ಆಡುವ ಸಾಧ್ಯತೆ ಇದೆ.

7 ಪಂದ್ಯಗಳಿಂದ 428 ರನ್‌ ಬಾರಿಸಿರುವ ಡೇವಿಡ್‌ ವಾರ್ನರ್‌ ಮತ್ತು ಮೊದಲ ಅವಕಾಶದಲ್ಲೇ ಸೆಂಚುರಿ ಹೊಡೆದಿರುವ ಟ್ರ್ಯಾವಿಸ್‌ ಹೆಡ್‌ ಬಲಿಷ್ಠ ಆರಂಭಿಕ ಜೋಡಿ. ಸ್ಮಿತ್‌, ಲಬುಶೇನ್‌, ಗ್ರೀನ್‌, ಇಂಗ್ಲಿಸ್‌, ಸ್ಟೋಯಿನಿಸ್‌ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲು ಶಕ್ತರು.ಅಫ್ಘಾನ್‌ ತ್ರಿವಳಿ ಸ್ಪಿನ್ನರ್‌ಗಳನ್ನು ಛೂ ಬಿಟ್ಟರೆ, ಆಸ್ಟ್ರೇಲಿಯಕ್ಕೆ ಆ್ಯಡಂ ಝಂಪ ಒಬ್ಬರೇ ಸಾಕು!

Advertisement

Udayavani is now on Telegram. Click here to join our channel and stay updated with the latest news.

Next