Advertisement

ಅಫ್ಘಾನ್‌ ಅಪಘಾತದ ದಾರಿಯಲ್ಲಿ ವಿಶ್ವ ಪಯಣ

10:40 PM Sep 22, 2021 | Team Udayavani |

ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳಿಂದ ಸಂಪೂರ್ಣ “ಕಚ್ಛಾ’ ಹಾಗೂ “ನೂತನ’ ಸರಕಾರದ ಸ್ಥಾಪನೆ ವಿಶ್ವದ ಆಗುಹೋಗುಗಳ ಬಗೆಗೆ ಹೊಸ ಅಧ್ಯಾಯ ತೆರೆದಂತೆಯೇ ಸರಿ. 1945ರ ವೇಳೆಗೆ ಎರಡನೇ ಜಾಗತಿಕ ಸಮರಾಂತ್ಯದಲ್ಲಿ ಕಮ್ಯುನಿಸಂ ಜಗತ್ತು ಹಾಗೂ ಜನತಂತ್ರೀಯ ಜಗತ್ತು  ಪರಸ್ಪರ ಮಾರ್ಮಲೆತು ನಿಂತಿತ್ತು. ವಾಸ್ತವಿಕವಾಗಿ ಸೋವಿಯತ್‌ ರಷ್ಯಾ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನ ಜಗದಗಲ ತಂತಮ್ಮ  ಪ್ರಾಬಲ್ಯ ಬೆಳೆಸುವ ಒಳಮರ್ಮದ ಪ್ರಚಂಡ ಪೈಪೋಟಿಯ ಧ್ರುವೀಕರಣ (Polarisation)ವನ್ನು 20ನೇ ಶತಮಾನದ ಮಧ್ಯಭಾಗದಲ್ಲಿ ತೆರೆದಿಟ್ಟವು. ಇದೀಗ 21ನೇ ಶತಮಾನದ 21ನೇ ವರ್ಷ ಈ ಹಿಂದಿನ ಆ ಧ್ರುವೀಕರಣವನ್ನು ಹಿಂದಿಕ್ಕಿ ವರ್ತಮಾನದ “ಭೀಕರ ಸ್ಥಿತ್ಯಂತರ’ಗಳನ್ನು ಅನಾವರಣಗೊಳಿಸುತ್ತಿದೆ. ನೋಡು ನೋಡು ತ್ತಿದ್ದಂತೆಯೇ ಭವಿಷ್ಯದ ವಿಶ್ವ ಇತಿಹಾಸಕ್ಕೆ ನೂತನ ಷರಾವನ್ನು ಬರೆಯುತ್ತಿದೆ.

Advertisement

ಇಲ್ಲಿನ ಮೂಲಭೂತ ತುಮುಲ -ಭೀತಿವಾದ ಅಥವಾ ಭಯೋತ್ಪಾದಕತೆ (Terrorism) ಸ್ವತಃ ಸಾಂಸ್ಥಿಕತೆ ಅಥವಾ ಸಾಂವಿಧಾನಿಕತೆಯ ಮುಖವಾಡ ಧರಿಸುತ್ತಿರುವುದು. ಕೇವಲ ರಕ್ತಪಿಪಾಸುಗಳು ನಾವಲ್ಲ; ಆಡಳಿತದ ಚುಕ್ಕಾ ಣಿಯನ್ನು ಹಿಡಿಯಲು ಸಶಕ್ತರು ಎಂಬುದನ್ನು ವಿಶ್ವಕುಟುಂಬಕ್ಕೆ  ಪ್ರದರ್ಶಿಸುವ ರಾಜಕೀಯ ಅಗ್ನಿಪರೀಕ್ಷೆ ಇದು. ಇದನ್ನೇ ಪಾಶ್ಚಾತ್ಯ “ಕ್ರೈಸ್ತ ಪ್ರಾಬಲ್ಯ’ದ ರಾಷ್ಟ್ರಗಳು ಹೇಗೆ ಸ್ವೀಕರಿಸುತ್ತವೆ  ಎಂಬುದು ಇನ್ನೂ ಅನಾವರಣಗೊಳ್ಳದ ಭವಿಷ್ಯದ ಗರ್ಭದಲ್ಲಿ ಅಡಗಿಕೊಂಡ ಕುತೂಹಲ. ಒಂದೊಮ್ಮೆ ಇದೇ ಭೂಗೋಲ ಮತೀಯ ಆಧಾರಿತವಾಗಿ ಈ ಹಿಂದೆ ಕಂಡುಕೊಂಡಿದೆ.  ಜೆಹಾದ್‌, ಕ್ರುಸೇಡ್‌ಗಳ ಮರು ತಾಲೀಮು ಈ  ಜಗತ್ತು ಕಂಡೀತೇ ಎಂಬುದೂ ಜ್ವಾಲಾಮುಖೀ ರಹಸ್ಯ. ಏಕೆಂದರೆ ಇತಿಹಾಸ  ಮರುಕಳಿಸುತ್ತದೆ (History Repeats) ಎಂಬ ನಾಣ್ಣುಡಿಗೆ ಮುಂದೆ ಬರಲಿರುವ ಸರಣಿ ಜಾಗತಿಕ ಸವಾ ಲುಗಳೇ ಕನ್ನಡಿ ಹಿಡಿದೀತೇ? ಎಂಬುದು ಪ್ರಮುಖ  ಪ್ರಶ್ನೆ.

ಜತೆಗೇ ಕೆಲವು ಉದ್ಘೋಷಿತ ಸತ್ಯಗಳ ಗೊಂಚಲೇ ಮಿಥ್ಯೆಯಾಗಿ ಮಾರ್ಪಡುವ ವಿದ್ಯಮಾನಗಳು ತನ್ನಿಂದ ತಾನೇ ವಿಶ್ವ ಪರದೆಯಲ್ಲಿ  ತೆರೆದುಕೊಳ್ಳಲಿದೆ. ಒಂದನೆಯ ದಾಗಿ ವಿಶ್ವಭೂಪಟದಲ್ಲಿ ಬಹುಸಂಖ್ಯಾಕ ಪಟ್ಟಿ  ದೊರೆತ  ತತ್‌ಕ್ಷಣ ಮೂಲಭೂತವಾದಿತ್ವ “ಶಾಂತಿ, ಸುಭಿಕ್ಷೆ,  ಸುರಕ್ಷೆ’ಯ ಗೂಡಾಗಲಿದೆ ಎಂಬ ಸತ್ಯ ನಗ್ನವಾಗಿ ಅದರೊಳಗಿನ ಮಿಥ್ಯೆ ಕಾಬೂಲಿನ ರಕ್ತದೋಕುಳಿ ಅನಾವರಣಗೊಳಿ ಸುತ್ತಿದೆ. ಎರಡನೆಯದಾಗಿ ಇಸ್ಲಾಂ ಜಗತ್ತು ಎಂಬ ಮತೀಯ ತೀಕ್ಷ್ಣವಾದಿಗಳ ಕೂಗು  ಪೂರ್ವ ಪಾಕಿಸ್ಥಾನ ಬಾಂಗ್ಲಾದೇಶವಾಗಿ ಪಲ್ಲಟಗೊಂಡಂತೆಯೇ ಪಾಕಿಸ್ಥಾನದ

ಐ.ಎಸ್‌.ಐ.ಯ ಕೈವಾಡ ಅಫ್ಘಾನಿಸ್ಥಾನ ದಲ್ಲಿಯೂ ಅಪಘಾತಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಧರ್ಮದ ಸೇವೆಯ “ರಾಷ್ಟ್ರ ಸ್ಥಾಪನೆ’ಯ ಒಳಮರ್ಮದಲ್ಲೇ ಪ್ರಾದೇಶಿಕತೆಯ ಅಗ್ನಿಮುಖ ಇಂದಲ್ಲ ನಾಳೆ ಪುಟಿ ದೇಳುವಿಕೆ ಶತಃಸಿದ್ಧ. ಮೂರನೆಯದಾಗಿ “ಇಸ್ಲಾಂ ಜಗತ್ತು’ ಎನ್ನುವ ಜಾಗತಿಕ ವ್ಯಾಖ್ಯಾನ ದೊಳಗಿನ ಸುನ್ನಿ, ಶಿಯಾ, ಬದ್ಧ ವೈರತ್ವ, ಮೂಲಭೂತವಾದದ ಜಂಘಾಬಲವನ್ನೇ ಕುಸಿತಗೊಳಿಸುವಿಕೆಯನ್ನು ಇರಾನ್‌- ಇರಾಕ್‌ ಈಗಾಗಲೇ ತೆರೆದಿಟ್ಟಿದೆ. ಅದೇ ರೀತಿ ಅನ್ಯಧರ್ಮೀಯ ಅಲ್ಪಸಂಖ್ಯಾಕರು ಬಿಡಿ, ಸ್ವಮತೀಯ ಅಲ್ಪ ಸಂಖ್ಯಾಕ ಸಮು ದಾಯಕ್ಕೂ ತಂತಮ್ಮ ರಾಷ್ಟ್ರದಲ್ಲೇನೆಲೆ, ಜೀವದ ಬೆಲೆ ಕಳೆದುಕೊಳ್ಳುವ ಭೀತಿ ಈ ಅಫ್ಘಾನಿಸ್ಥಾನದ ಪರದೆಯಾಚೆಗೆ ಬಣ್ಣ ಹಚ್ಚಿ ಕಾದು ನಿಂತಿದೆ.

ಇನ್ನು  ಪ್ರಕೃತಿ ಅಥವಾ ದೇವರ ಸೃಷ್ಟಿ ಎಂಬಂಥ  ಸಮಗ್ರ ಮಾನವ ಕುಲದ ಸ್ತ್ರೀ ಸಮುದಾಯದ ಗೌರವ, ಪ್ರಯತ್ನಶೀಲತೆ, ಶಿಕ್ಷಣ, ಕ್ರೀಡೆ, ಸರ್ವಾಂಗೀಣ ಪ್ರಗತಿ, ಸಾಮುದಾಯಿಕ ಸಮಪಾಲು ಇವೆಲ್ಲದಕ್ಕೂ ಕುಠಾರಪ್ರಾಯವಾಗಿ ಈ ರಾಜಕೀಯ ಪ್ರಯೋಗ ಎದ್ದು ತೋರಲಿದೆ. ತತ್ಪರಿಣಾಮ “ಮಹಿಳಾ ಅಭ್ಯುದಯ’ ಎಂಬುದೇ ಶೂನ್ಯ ಸೂಚ್ಯಂಕ ಕಂಡಾಗ, ರಾಷ್ಟ್ರದ ಸಮಗ್ರ ಪ್ರಗತಿ ಎಂಬುದು ಜಾರುವ ದಾರಿಯಲ್ಲಿದೆ ಎಂಬ ಪ್ರಖ್ಯಾತ ವ್ಯಾಖ್ಯಾನವೇ ಬೇಡ. ಮಹಿಳಾ ಪ್ರಧಾನಿಗಳಿಂದ ಹಿಡಿದು, ವಿಜ್ಞಾನಿಗಳು, ಸಮಾಜ ಸುಧಾರಕಿಯರು, ಕ್ರೀಡಾಪಟುಗಳು- ಇವೆಲ್ಲವೂ ಹಲವಾರು ಶತಮಾನಗಳ ಹಿಂದಿನ ಸಮಯದ ಗಡಿ ಯಾರಕ್ಕೆ ಜೋತು ಬೀಳುತ್ತಿದೆ. ಇಂತಹ ಒಳರೋದನವನ್ನು ಇರಾನ್‌, ಟರ್ಕಿಯಂತಹ ರಾಷ್ಟ್ರಗಳು ಈಗಾಗಲೇ ಅನುಭವಿಸಿವೆ. ಇದೀಗ ತಾಲಿಬಾನ್‌ ವಿಜೃಂಭಣೆ ಇದೇ ವಿದ್ಯಮಾನಕ್ಕೆ ತಾಲೀಮುರಂಗವಾಗಿ ಕಾಣಿಸಿಕೊಳ್ಳಲಿದೆ.

Advertisement

ಕೊನೆಯದಾಗಿ “ಟೆರರಿಸಂ’ಗೆ ವಿಶ್ವಸಂಸ್ಥೆ, ಯುರೋಪಿಯನ್‌ ಕೂಟಗಳು ಅದೇ ರೀತಿ ನಮ್ಮ ಭಾರತವೂ ಸೇರಿದ ಪೂರ್ವ ರಾಷ್ಟ್ರಗಳು ಬದ್ಧ ವೈರತ್ವದ ಸಿದ್ಧಾಂತವನ್ನು ಬಿಗಿಗೊಳಿಸಿವೆ. ಕೇವಲ ತನ್ನ ವಿನೂತನ ವಿಸ್ತರಣಾವಾದ (Non & Expansionism)ವೊಂದನ್ನೇ ತನ್ನ ವಿದೇಶಾಂಗ ನೀತಿಯಾಗಿಸಿದ ಚೀನ ತಾಲಿಬಾನ್‌ನ ಜತೆ ಕೈ ಜೋಡಿಸಿದೆ. ಇದರಲ್ಲಿ ಬೀಜಿಂಗ್‌ನ ಸ್ವಾರ್ಥ ಹೊರತುಪಡಿಸಿದರೆ ಮತ್ತೇನೊ “ಮತೀಯ ಮೈತ್ರಿ’ಯ ಲವಲೇ ಶವೂ ಇಲ್ಲ. ಅದೇ ರೀತಿ ತನ್ನ ಪ್ರಾಬಲ್ಯ ಸಂವರ್ಧನೆ ಹಾಗೂ “ಭಾರತ ವೈರತ್ವ’ ಹೊರತುಪಡಿಸಿದರೆ ಇಸ್ಲಾಮಾಬಾದಿನ ನೀತಿಯೂ “ಶುದ್ಧ ಧಾರ್ಮಿಕತೆ’ಯ ಹೊಳಹು ಹೊಂದಿಲ್ಲ. ಏಕೆಂದರೆ  “ವೈರಿಯ ವೈರಿ ಮಿತ್ರ’ ಎಂಬ ಕೌಟಿಲ್ಯನ “ಮಂಡಲ ಸಿದ್ಧಾಂತ’ದ ಸಾರ್ವಕಾಲಿಕ ಸತ್ಯ ಎಂಬಂತೆ ಪಾಕಿಸ್ಥಾನ ಹಾಗೂ ಅದರ ನೆರೆರಾಷ್ಟ್ರ

ಅಫ್ಘಾ ನಿಸ್ಥಾನ ಮೊನ್ನೆ ಮೊನ್ನೆಯವರೆಗೆ ಕತ್ತಿ ಮಸೆ ಯುತ್ತಿತ್ತು. ಕಾಬೂಲಿನ ಮಾಜಿ ಸರಕಾರಕ್ಕೆ ಪ್ರಗತಿಯ ಪೂರಕ ಶಕ್ತಿ ನೀಡುವಲ್ಲಿ ನಮ್ಮ ಸರಕಾರವೂ ಸಹಜವಾಗಿ ಶ್ರಮಿಸಿತ್ತು. ಆದರೆ ಇದೀಗ ಕದಡಿದ ನೀರಲ್ಲಿ ಮೀನು ಹಿಡಿ ಯುವ ಕಾಯಕದ ಚೀನ- ಪಾಕಿಸ್ಥಾನದ ಕೂಟ ತಂತ್ರಗಾರಿಕೆಯ ವಿರುದ್ಧ ಭಾರತ ರೂಪಿಸಲಿರುವ ಹೊಸ ನೀತಿ ದೇಶದ ಭವಿಷ್ಯದ ನಡೆಗೆ ದಿಕ್ಸೂಚಿಯಾಗಬೇಕಿದೆ.

-ಡಾ| ಪಿ. ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next