ಶಾರ್ಜಾ: ಐಸಿಸಿ ಟಿ20 ವಿಶ್ವಕಪ್ ನ ಸೋಮವಾರದ ಪಂದ್ಯದಲ್ಲಿ ಅಫ್ಗಾನಿಸ್ಥಾನ ತಂಡ ಭರ್ಜರಿ ಗೆಲುವು ಸಾಧಿಸಿದೆ. ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನಬಿ ಹುಡುಗರು 130 ರನ್ ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ‘ಬಿ’ ಗ್ರೂಪ್ ನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ನೆಗೆದಿದೆ.
ಮೊದಲು ಬ್ಯಾಟ್ ಮಾಡಿದ್ದ ಆಫ್ಘನ್ನರು 4 ವಿಕೆಟಿಗೆ 190 ರನ್ ಪೇರಿಸಿ, ಸ್ಕಾಟ್ ಲೆಂಡ್‌ಗೆ ದೊಡ್ಡ ಮೊತ್ತವನ್ನೇ ಗುರಿಯಾಗಿ ನೀಡಿದ್ದರು. ಈ ಮೊತ್ತ ಬೆನ್ನತ್ತಿದ ಸ್ಕಾಟ್ಲೆಂಡ್ 10.2 ಓವರ್ ಗಳಲ್ಲಿ 60 ರನ್‌ಗೆ ಆಲೌಟ್ ಆಯಿತು.
ಹಜ್ರತುಲ್ಲ ಜಜಾಯ್ (44) ಮತ್ತು ಕೀಪರ್ ಮೊಹಮ್ಮದ್ ಶಾಜಾದ್ (22) ಅಫ್ಘಾನಿಸ್ತಾನಕ್ಕೆ ಬಿರುಸಿನ ಆರಂಭವಿತ್ತರು. ಜಜಾಯ್ ಸಿಡಿಸಿದ್ದು 3 ಸಿಕ್ಸರ್ ಹಾಗೂ 3 ಬೌಂಡರಿ. ಆಫ್ಗನ್ ನ ಈ ಓಟದಲ್ಲಿ ತೃತೀಯ ವಿಕೆಟಿಗೆ ಜತೆಗೂಡಿದ ರಹಮತುಲ್ಲ ಗುರ್ಬಜ್ ಮತ್ತು ನಜೀಬುಲ್ಲ ಜದ್ರಾನ್ ಅವರ ಪಾತ್ರ ಮಹತ್ವದ್ದಾಗಿತ್ತು. ಬಿರುಸಿನ ಆಟಕ್ಕೆ ಇಳಿದು 52 ಎಸೆತಗಳಿಂದ 87 ರನ್ ಪೇರಿಸಿದರು. ಗುರ್ಬಜ್ 4 ಸಿಕ್ಸರ್, ಒಂದು ಬೌಂಡರಿ ಬಾರಿಸಿ 37 ಎಸೆತಗಳಿಂದ 46 ರನ್ ಚಚ್ಚಿದರು. ಅಂತಿಮ ಎಸೆತದಲ್ಲಿ ಔಟಾದ ಜದ್ರಾನ್ 34 ಎಸೆತ ಎದುರಿಸಿ ಸರ್ವಾಧಿಕ 59 ರನ್ ಹೊಡೆದರು.
ಇದನ್ನೂ ಓದಿ:ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು
ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ತಂಡ ಸ್ಪಿನ್ ಜಾಲಕ್ಕೆ ಬಿದ್ದು ಒದ್ದಾಡಿತು. ಮುಜಿಬ್ ಉರ್ ರೆಹಮಾನ್ 5 ವಿಕೆಟ್, ರಶೀದ್ 4 ವಿಕೆಟ್ ಪಡೆದು ಸ್ಕಾಟ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲೆಬು ಮುರಿದರು. ಸ್ಕಾಟ್ಲೆಂಡ್ ನ ಮುನ್ಸೆ ಮಾತ್ರ 25 ರನ್ ಗಳಿಸಿದರು.
ಭಾರತ, ಪಾಕ್, ಕಿವೀಸ್ ಸಂಕಷ್ಟ: 130 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ ಅಫ್ಘಾನ್ ತಂಡ ಒಂದೇ ಪಂದ್ಯದಿಂದ +6.500 ರನ್ ರೇಟ್ ಪಡೆಯಿತು. ಭಾರತ ವಿರುದ್ಧ ಗೆದ್ದಿದ್ದ ಪಾಕ್ ಪಡೆದಿದ್ದು +0.973 ರನ್ ರೇಟ್ ಮಾತ್ರ. ಒಂದು ವೇಳೆ ಅಫ್ಘಾನ್ ತಂಡ ತನ್ನ ಮುಂದಿನ ಕೆಲ ಪಂದ್ಯಗಳನ್ನು ಗೆದ್ದರೆ ಉತ್ತಮ ರನ್ ರೇಟ್ ಸಹಾಯದಿಂದ ಸೆಮಿ ಫೈನಲ್ ಪ್ರವೇಶಿಸಬಹುದು. ಆಗ ಪ್ರಮುಖ ತಂಡಗಳಾದ ಭಾರತ, ಪಾಕಿಸ್ಥಾನ, ನ್ಯೂಜಿಲ್ಯಾಂಡ್ ತಂಡಗಳಲ್ಲಿ ಯಾವುದಾದರೂ ತಂಡ ನಿರಾಶೆ ಅನುಭವಿಸಬೇಕಾಗುತ್ತದೆ. ಅಂದಹಾಗೆ ಅಫ್ಘಾನಿಸ್ಥಾನದ ಮುಂದಿನ ಎದುರಾಳಿ ನಮೀಬಿಯಾ!