Advertisement

ಸಂಘರ್ಷದ ಬದಲು ಸೌಹಾರ್ದ : ಆಫ್ಘನ್ ಸರಕಾರ ತೀರ್ಮಾನ

03:54 AM Jul 15, 2021 | Team Udayavani |

ಕಾಬೂಲ್‌/ದುಶಾಂಬೆ: ತಾಲಿಬಾನ್‌ ಉಗ್ರ ಸಂಘಟನೆಯ ಜತೆಗೆ ಸಂಘರ್ಷದ ಬದಲು ಸೌಹಾರ್ದಯುತ ಮಾತುಕತೆ ನಡೆಸಲು ಅಫ್ಘಾನಿಸ್ಥಾನ ಸರಕಾರ ತೀರ್ಮಾನಿಸಿದೆ. ಅದಕ್ಕೆ ಪೂರಕವಾಗಿ ಕತಾರ್‌ನ ದೋಹಾದಲ್ಲಿ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಉಗ್ರ ಸಂಘಟನೆಯ ಪ್ರತಿನಿಧಿಗಳ ಜತೆಗೆ ಶಾಂತಿ ಮಾತುಕತೆ ನಡೆಸಲು ತೀರ್ಮಾನಿಸಿದೆ. ಶುಕ್ರವಾರ (ಜು.16) ಎರಡೂ ತಂಡಗಳು ಪರಸ್ಪರ ಕುಳಿತು, ದೀರ್ಘ‌ಕಾಲದಿಂದ ಕಗ್ಗಂಟಾಗಿ ಉಳಿದಿರುವ ಶಾಂತಿ ಸ್ಥಾಪನೆಯ ಬಗ್ಗೆ ಸಮಾಲೋಚನೆ ಮುಂದುವರಿಸಲು ಮುಂದಡಿ ಇಡುವ ಸಾಧ್ಯತೆಗಳಿವೆ.

Advertisement

ಉಗ್ರ ಸಂಘಟನೆ ತಾಲಿಬಾನ್‌ ದೋಹಾದಲ್ಲಿ ಅಧಿಕೃತ ಕಚೇರಿಯನ್ನೇ ಹೊಂದಿದೆ. ಅಮೆರಿಕ ಮತ್ತು ನ್ಯಾಟೋ ಪಡೆಗಳು ತಮ್ಮ ಸೇನೆಯನ್ನು ವಾಪಸ್‌ ಕರೆಯಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಮಾತುಕತೆಗೆ ವೇಗ ಸಿಕ್ಕಿದೆ. ಅಫ್ಘಾನಿಸ್ಥಾನದ ಮಾಜಿ ಸಚಿವ ಡಾ.ಅಬ್ದುಲ್ಲಾ ಅಬ್ದುಲ್ಲಾ ಸರ್ಕಾರದ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಜತೆಗೆ ಮಾಜಿ ಅಧ್ಯಕ್ಷ ಹಮೀದ್‌ ಕಜೈì ಕೂಡ ನಿಯೋಗದಲ್ಲಿ ಇರಲಿದಾರು ಕಳೆದ ವರ್ಷ ಫೆಬ್ರವರಿಯಲ್ಲಿ ಉಗ್ರ ಸಂಘಟನೆ ಮತ್ತು ಅಮೆರಿಕ ಸರಕಾರದ ಒಪ್ಪಂದದ ಅನ್ವಯ ಶಾಂತಿ ಸ್ಥಾಪನೆಯೇ ಮಾತುಕತೆಯ ಅಜೆಂಡಾ ಆಗಿರಲಿದೆ. ಇದೇ ವೇಳೆ, ಫ್ರಾನ್ಸ್‌, ಆಸ್ಟ್ರೇಲಿಯ ಸರಕಾರಗಳು ಕೂಡ ಆಫ್ಘನ್ ನಲ್ಲಿರುವ ತಮ್ಮ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ತೀರ್ಮಾನಿಸಿವೆ.

2,70,000 ಹೊಸ ನಿರಾಶ್ರಿತರು: ಜನವರಿಯಿಂದ ಈಚೆಗೆ ಅಫ್ಘಾನಿಸ್ಥಾನದಲ್ಲಿ ಹಿಂಸೆ, ಗಲಭೆಗಳಿಂದ ಹೊಸ­ತಾಗಿ 2,70,000 ಮಂದಿ ನಿರ್ವಸಿತರಾಗಿದ್ದಾರೆ. ಹೀಗೆಂದು ವಿಶ್ವಸಂಸ್ಥೆಯೇ ಅಂದಾಜು ಮಾಡಿದೆ. ತಾಲಿ­ಬಾನ್‌ ಹೆಚ್ಚಿನ ಪ್ರದೇಶಗಳ ನಿಯಂತ್ರಣ ಪಡೆಯು­ತ್ತಿರುವುದು ಕಳವಳಕಾರಿ ಎಂದೂ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಆಯೋಗ (ಯುಎನ್‌ಎಚ್‌ಸಿಆರ್‌) ಅಭಿಪ್ರಾಯ ಪಟ್ಟಿದೆ.

ಮಾತುಕತೆಯೇ ಮಾರ್ಗ
ಅಫ್ಘಾನಿಸ್ಥಾನದ ಭವಿಷ್ಯವು ಭೂತಕಾಲದ ಘಟನೆಗಳನ್ನು ಆಧರಿಸಿ ಇರಬಾರದು. ಶಾಂತಿ ಸ್ಥಾಪನೆಗಾಗಿ ಮಾತುಕತೆಯೊಂದೇ ಪರಿಹಾರ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ತಜಿಕಿಸ್ಥಾನ ರಾಜಧಾನಿ ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ, ಯುದ್ಧಗ್ರಸ್ಥ ರಾಷ್ಟ್ರದ ಬಗೆಗಿನ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ದೋಹಾದಲ್ಲಿ ಇಬ್ಬರಿಗೂ ಸಮ್ಮತವಾಗುವ ಪ್ರಸ್ತಾಪ ಅಂಗೀಕಾರಗೊಳ್ಳಬೇಕಿದೆ. ಅಫ್ಘಾನಿಸ್ಥಾನದ ನೆರೆಯ ರಾಷ್ಟ್ರಗಳು ಭಯೋತ್ಪಾದನೆ, ಪ್ರತ್ಯೇಕತಾವಾದ, ತೀವ್ರಗಾಮಿತ್ವದಿಂದ ಭೀತಿಯಲ್ಲಿ ಇರುವಂಥ ವಾತಾವರಣ ನಿರ್ಮಾಣವಾಗಬಾರದು ಎಂದರು. ಇದರ ಜತೆಗೆ ಸಹಕಾರ ಒಕ್ಕೂಟದ ರಾಷ್ಟ್ರಗಳು ಉಗ್ರವಾದಕ್ಕೆ ಬೆಂಬಲ ನೀಡಬಾರದು. ಉಗ್ರರಿಗೆ ಹಣಕಾಸು ನೆರವು ನೀಡುವುದಕ್ಕೆ ಕಡಿವಾಣ ಹಾಕಬೇಕು ಎಂದೂ ಪ್ರತಿಪಾದಿಸಿದ್ದಾರೆ ಜೈಶಂಕರ್‌.

ಪಡೆಗಳ ವಾಪಸ್‌ ತಪ್ಪು ನಿರ್ಧಾರ
ಯುದ್ಧಗ್ರಸ್ಥ ರಾಷ್ಟ್ರದಿಂದ ಸೇನಾಪಡೆಗಳನ್ನು ವಾಪಸ್‌ ಪಡೆಯುವ ಹಾಲಿ ಸರ್ಕಾರದ ನಿರ್ಧಾರ ತಪ್ಪು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲೂ.ಬುಷ್‌ ಅಭಿಪ್ರಾಯ­ಪಟ್ಟಿದ್ದಾರೆ. ತಾಲಿ­ಬಾನ್‌ ಉಗ್ರರು ಆ ದೇಶದ ಪ್ರಜೆಗಳನ್ನು ನಿರ್ದಯವಾಗಿ ಕೊಲ್ಲುತ್ತಿದ್ದಾರೆ. ಸೆಪ್ಟೆಂಬರ್‌ ಒಳಗಾಗಿ ಸೇನಾ ಪಡೆಗಳನ್ನು ವಾಪಸ್‌ ಪಡೆಯುವ ಅಧ್ಯಕ್ಷ ಜೋ ಬೈಡೆನ್‌ ನಿರ್ಧಾರ ಸರಿಯಾದದ್ದಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next