ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯಕ್ಕೆ ಪಿಎಚ್ ಡಿ ಅಧ್ಯಯನಕ್ಕೆ ಬಂದಿರುವ ಅಪಘಾನಿಸ್ತಾನದ ವಿದ್ಯಾರ್ಥಿಗಳು ತಮ್ಮ ದೇಶದ ರಾಜಕೀಯ ಅಧಃಪತನ ನೋಡಿ ಇದೀಗ ಕಣ್ಣೀರು ಇಟ್ಟಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಕೃಷಿ ಸಂರಕ್ಷಣಾ ವಿಷಯದಲ್ಲಿ ಪಿಎಚ್‌ಡಿ ಮಾಡಲು ಬಂದಿರುವ ಈ ವಿದ್ಯಾರ್ಥಿಗಳು, ತಮ್ಮ ದೇಶವನ್ನು ತಾಲಿಬಾನಿಗಳು ವಶಕ್ಕೆ ಪಡೆದಿರುವುದನ್ನು ಕೇಳಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಒಟ್ಟು 15 ವಿದ್ಯಾರ್ಥಿಗಳು ಕೃಷಿ ವಿವಿಗೆ ಅಧ್ಯಯನಕ್ಕೆಂದು ಬಂದಿದ್ದರು. ಕೊರೊನಾ ಎರಡನೇ ಅಲೆ ವೇಳೆ ಐವರು ವಿದ್ಯಾರ್ಥಿಗಳು ಮರಳಿ ತಮ್ಮ ದೇಶಕ್ಕೆ ಹೋಗಿ ಇದೀಗ ಅಲ್ಲಿ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದ್ದಾರೆ. 10 ವಿದ್ಯಾರ್ಥಿಗಳು ಧಾರವಾಡದಲ್ಲೇ ಉಳಿದಿದ್ದು, ತಮ್ಮ ಕುಟುಂಬದ ಬಗ್ಗೆ ವಿಚಾರ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಮೆರಿಟ್ ಪಡೆದು ಹೆಚ್ಚಿನ ವ್ಯಾಸಾಂಗಕ್ಕಾಗಿ ಬಂದಿದ್ದ ಇವರು, ಇದೀಗ ತಮ್ಮ ದೇಶಕ್ಕೆ ಎದುರಾಗಿರುವ ವಿಷಮ ಪರಿಸ್ಥಿತಿ ನೆನೆದು ಕಣ್ಣೀರು ಹಾಕುವಂತಾಗಿದೆ. ಅಧ್ಯಯನ ಬಿಟ್ಟು ತಮ್ಮ ಕುಟುಂಬದ ಸದಸ್ಯರ ಬಗ್ಗೆ ಇವರು ಚಿಂತೆ ಮಾಡುವಂತಾಗಿದ್ದು, ತಮ್ಮ ಕುಟುಂಬದ ಸದಸ್ಯರ ಜೊತೆಗೆ ಇದೀಗ ಮಾತನಾಡಿರುವುದಾಗಿ ಅಫ್ಘಾನಿಸ್ತಾನದ ವಿದ್ಯಾರ್ಥಿ ನಸ್ರತ್‌ಉಲ್ಲಾ ಕಾಕರ ತಿಳಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ ಈ ವಿದ್ಯಾರ್ಥಿಗಳು ಉಳಿದುಕೊಂಡಿದ್ದು, ತಮ್ಮ ಕುಟುಂಬದ ಸದಸ್ಯರಿಗೆ ಪ್ರತಿಕ್ಷಣ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಸದ್ಯ ನಮ್ಮ ಕುಟುಂಬದ ಸದಸ್ಯರಿಗೆ ತಾಲಿಬಾನಿಗಳಿಂದ ಯಾವುದೇ ತೊಂದರೆ ಆಗಿಲ್ಲ ಎಂಬುದನ್ನು ತಿಳಿದುಕೊಂಡಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.