Advertisement
ಅಫ್ಘಾನಿಸ್ಥಾನವು ತಾಲಿಬಾನ್ ವಶವಾಗಿ 8 ದಿನಗಳು ಕಳೆದಿವೆ. ರವಿವಾರದ ವರೆಗೆ ಒಟ್ಟು 392 ಮಂದಿ ಭಾರತಕ್ಕೆ ಆಗಮಿಸಿದ್ದಾರೆ. ಇವರಲ್ಲಿ 23 ಮಂದಿ ಅಫ್ಘಾನಿ ಹಿಂದೂಗಳು ಮತ್ತು ಸಿಕ್ಖರಿದ್ದಾರೆ. ರವಿವಾರ 257 ಮಂದಿ ಆಗಮಿಸಿದ್ದಾರೆ. 168 ಮಂದಿ ವಾಯುಪಡೆಯ ಸಿ-17 ವಿಶೇಷ ವಿಮಾನದ ಮೂಲಕ ಘಾಜಿಯಾ ಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಇಳಿದಿದ್ದಾರೆ. ಇವರಲ್ಲಿ 107 ಮಂದಿ ಭಾರತೀ ಯರು, 23 ಮಂದಿ ಅಫ್ಘಾನಿ ಹಿಂದೂಗಳು ಮತ್ತು ಸಿಕ್ಖರಿದ್ದಾರೆ. ಅಫ್ಘಾನ್ ಸಂಸದ ಅನಾರ್ಕಲಿ ಹೊನರ್‌ಯಾರ್ ಮತ್ತು ನರೇಂದ್ರ ಸಿಂಗ್ ಖಾಲ್ಸ ಹಾಗೂ ಅವರ ಕುಟುಂಬದವರೂ ಪಾರಾಗಿ ಭಾರತ ಸೇರಿದ್ದಾರೆ. ಮತ್ತೂಂದು ವಿಶೇಷ ವಿಮಾನದಲ್ಲಿ 89 ಮಂದಿ ಹೊಸದಿಲ್ಲಿಗೆ ಬಂದಿದ್ದಾರೆ.
Related Articles
Advertisement
ಅಫ್ಘಾನ್‌ನಲ್ಲಿ ಪೋಲಿಯೋ ಪ್ರಕರಣಗಳಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿಂದ ಬಂದ ಎಲ್ಲರಿಗೂ ಉಚಿತ ಪೋಲಿಯೋ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿ
ದ್ದಾರೆ. ಹೊಸದಿಲ್ಲಿ ವಿಮಾನ ನಿಲ್ದಾಣ ದಲ್ಲಿ ಲಸಿಕೆ ಹಾಕುವ ಫೋಟೋವನ್ನು ಅವರು ಟ್ವೀಟ್ ಮಾಡಿದ್ದಾರೆ.
ಸಣ್ಣ ತಂಡ :
ಕಾಬೂಲ್ ವಿಮಾನ ನಿಲ್ದಾಣ ದಿಂದ ಭಾರತೀಯರನ್ನು ಕರೆತರುವುದಕ್ಕಾಗಿ ಹಲವು ಸಚಿವಾಲಯಗಳಿಗೆ ಸೇರಿದ ಅಧಿಕಾರಿಗಳ ಸಣ್ಣ ತಂಡ ಅಲ್ಲಿ ಕಾರ್ಯನಿರತವಾಗಿದೆ. ಅದು ವಿಮಾನ ನಿಲ್ದಾಣದಲ್ಲಿ ಅಥವಾ ರಾಯಭಾರ ಕಚೇರಿಯಲ್ಲಿ ಕಾರ್ಯ ವೆಸಗುತ್ತಿದೆಯೋ ಎಂಬುದು ತಿಳಿದಿಲ್ಲ.
ಕಂಬನಿಗರೆದ ಖಾಲ್ಸ
ಹಿಂಡನ್ ವಾಯುನೆಲೆಯಲ್ಲಿ ಬಂದಿಳಿದ ಬಳಿಕ ಮಾತನಾಡಿದ ಸಿಕ್ಖ್ ಮುಖಂಡ, ಮಾಜಿ ಸಂಸದ ನರೇಂದ್ರ ಸಿಂಗ್ ಖಾಲ್ಸ ಅವರು, “ಭಾರತ ನಮ್ಮ ಎರಡನೇ ಮನೆ. ಪ್ರಧಾನಿ ಮೋದಿ ನೇತೃತ್ವದ ಸರಕಾರ ನಮ್ಮನ್ನು ಸುರಕ್ಷಿತವಾಗಿ ಕರೆತಂದಿದೆ. 20 ವರ್ಷಗಳಲ್ಲಿ ಭಾರತದ ನೆರವಿನಿಂದ ಅಫ್ಘಾನ್ ಸಾಕಷ್ಟು ಅಭಿವೃದ್ಧಿ ಕಂಡಿತ್ತು. ಈಗ ಅದೆಲ್ಲವೂ ಶೂನ್ಯ. ಶೀಘ್ರದಲ್ಲಿಯೇ ಪರಿಸ್ಥಿತಿ ಸುಧಾರಣೆಗೊಂಡು ಅಫ್ಘಾನ್‌ಗೆ ಮರಳುವ ವಿಶ್ವಾಸವಿದೆ’ ಎಂದರು.
ಮರಳಿದ ಕನ್ನಡಿಗರು :
ಬೆಂಗಳೂರು: ರವಿವಾರ ಅಫ್ಘಾನಿ ಸ್ಥಾನದಿಂದ ಏಳು ಕನ್ನಡಿಗರು ರಾಜ್ಯಕ್ಕೆ ವಾಪಸಾಗಿದ್ದು, ಇಬ್ಬರು ಮರಳಿ ಬರಲು ಸಿದ್ಧರಾಗಿದ್ದಾರೆ. ಬಜಪೆಯ ದಿನೇಶ್ ರೈ, ಮೂಡುಬಿದಿರೆಯ ಜಗದೀಶ್ ಪೂಜಾರಿ, ಕಿನ್ನಿಗೋಳಿಯ ಡೆಸ್ಮಂಡ್ ಡೇವಿಸ್ ಡಿ’ಸೋಜಾ, ಉಳ್ಳಾಲದ ಪ್ರಸಾದ್ ಆನಂದ್, ಬಿಜೈಯ ಶ್ರವಣ್ ಅಂಚನ್, ಬೆಂಗ ಳೂರಿನ ಹಿರಕ್ ದೇಬನಾಥ್, ಬಳ್ಳಾರಿಯ ತನ್ವಿನ್ ಅಬ್ದುಲ್ ವಾಪಸಾ ಗಿದ್ದಾರೆ ಎಂದು ಸರಕಾರ ತಿಳಿಸಿದೆ.
ಮಂಗಳೂರಿನ ಫಾ| ಜೆರೊನಾ ಸಿಕ್ವೇರಾ, ಚಿಕ್ಕಮಗಳೂರಿನ ಫಾ| ರಾಬರ್ಟ್ ಕ್ಲೈವ್ ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದು, ಸಿ| ಥೆರೆಸಾ ಕ್ರಾಸ್ತಾ ಅವರು ಇಟಲಿಗೆ ತೆರಳುವುದಾಗಿ ಮಾಹಿತಿ ನೀಡಿದ್ದಾರೆ ಎಂದೂ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಅಫ್ಘಾನ್‌ನಲ್ಲಿ 500 ಮಂದಿ ಭಾರತೀಯರು ಇದ್ದಾರೆ. ಅಲ್ಲಿಂದ ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆ ತಡೆ ಇಲ್ಲದೆ ಸಾಗುತ್ತಿದೆ. ಸ್ವದೇಶಕ್ಕೆ ಮರಳಬೇಕು ಎಂಬ ಇಚ್ಛೆ ಹೊಂದಿರುವ ಎಲ್ಲರನ್ನೂ ಕರೆತರುತ್ತೇವೆ. – ವಿ. ಮುರಳೀಧರನ್, ವಿದೇಶಾಂಗ ಖಾತೆಯ ಸಹಾಯಕ ಸಚಿವ