Advertisement
ಅಮೆರಿಕವು ಊಹಿಸಿರದಷ್ಟು ವೇಗದಲ್ಲಿ ತಾಲಿಬಾನ್ ಉಗ್ರರು ಅಫ್ಘಾನ್‌ನ ಮೂರನೇ ಎರಡರಷ್ಟು ಭಾಗದಲ್ಲಿ ಹಿಡಿತ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಶ್ವೇತಭವನ, “ಉಗ್ರರನ್ನು ಎದುರುಹಾಕಿಕೊಂಡು ಹೋರಾಡುವ ರಾಜಕೀಯ ಇಚ್ಛಾಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಅಫ್ಘಾನ್ ನಾಯಕತ್ವವೇ ನಿರ್ಧರಿಸಬೇಕು’ ಎಂದು ಹೇಳಿದೆ. ಅಷ್ಟೇ ಅಲ್ಲ, ಪರಿಸ್ಥಿತಿ ನೋಡಿದರೆ ಕಾಬೂಲ್‌ನ ಪತನವನ್ನು ತಪ್ಪಿಸಲು ಸಾಧ್ಯವೇ ಇಲ್ಲ ಎಂದೂ ಪೆಂಟಗನ್‌ನ ಮುಖ್ಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಈ ಮೂಲಕ ನಮಗೂ ಅಫ್ಘಾನ್‌ಗೂ ಸಂಬಂಧವೇ ಇಲ್ಲ ಎಂಬ ಸುಳಿವನ್ನು ಅಮೆರಿಕ ನೀಡಿದೆ. ಅಮೆರಿಕ ತಮ್ಮ ನೆರವಿಗೆ ಬರಲಿದೆ ಎಂದು ಕಾಯುತ್ತಿರುವ ಅಫ್ಘಾನ್ ಸಕಾರಕ್ಕೆ ಇದು ದೊಡ್ಡ ಹಿನ್ನಡೆ ಉಂಟು ಮಾಡಿದೆ.
Related Articles
Advertisement
ನಿರ್ವಸಿತರಾದ 4 ಲಕ್ಷ ನಾಗರಿಕರು :
ಪ್ರಸಕ್ತ ವರ್ಷ ಹೊಸದಾಗಿ 4 ಲಕ್ಷ ಆಘ್ಘನ್ ನಾಗರಿಕರು ನಿರ್ವಸಿತರಾಗಿದ್ದಾರೆ. ಅದರಲ್ಲೂ ಮೇ ತಿಂಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆ್ಯಂಟೋನಿಯೋ ಗುಟೆರಸ್ ಹೇಳಿದ್ದಾರೆ. ಜುಲೈ 9ರಿಂದ ಈವರೆಗೆ ಕೇವಲ 4 ನಗರಗಳಲ್ಲೇ ತಾಲಿಬಾನ್ ಉಗ್ರರು ಕನಿಷ್ಠ 183 ನಾಗರಿಕರನ್ನು ಹತ್ಯೆಗೈದಿದ್ದಾರೆ. ಉಗ್ರರ ದಾಳಿಗೆ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸೇನಾ ಮುಖ್ಯಸ್ಥರ ಬದಲಾವಣೆ :
ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಫ್ಘಾನ್ ಸೇನೆಗೆ ಹಿನ್ನಡೆಯಾಗುತ್ತಿರುವ ಬೆನ್ನಲ್ಲೇ ಗುರುವಾರ ದಿಢೀರನೆ ಸೇನಾ ಮುಖ್ಯಸ್ಥರನ್ನೇ ಬದಲಾಯಿಸಲಾಗಿದೆ. ಸೇನೆಯ ವಿಶೇಷ ಕಾರ್ಯಾಚರಣೆಯ ಕಮಾಂಡರ್ ಹುದ್ದೆಯಿಂದ ಜನರಲ್ ವಲಿ ಮೊಹಮ್ಮದ್ ಅಹ್ಮದ್‌ಝೈ ಅವರನ್ನು ತೆಗೆದುಹಾಕಿ, ಅವರ ಸ್ಥಾನಕ್ಕೆ ಹಿಬಾತುಲ್ಲಾ ಅಲಿಝೈ ಅವರನ್ನು ನೇಮಕ ಮಾಡಲಾಗಿದೆ.
ಅಮೆರಿಕಕ್ಕೆ ವ್ಯೂಹಾತ್ಮಕ ಪಾಲುದಾರಿಕೆ ಮಾಡಿಕೊಳ್ಳಲು ಭಾರತ ಬೇಕು. 20 ವರ್ಷಗಳ ಯುದ್ಧದ ಬಳಿಕ ಅಫ್ಘಾನ್‌ನಲ್ಲಿ ತಾನು ಮಾಡಿರುವ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಪಾಕಿಸ್ತಾನ ಬೇಕು. ಭಾರತದೊಂದಿಗೆ ಸಂಬಂಧ ಬೆಳೆಸಿದ ಬಳಿಕ ಅಮೆರಿಕ ನಮ್ಮನ್ನು ಭಿನ್ನವಾಗಿ ನೋಡುತ್ತಿದೆ.-ಇಮ್ರಾನ್ ಖಾನ್, ಪಾಕ್ ಪ್ರಧಾನಿ
ತಾಲಿಬಾನ್ ಉಗ್ರರು ನಡೆಸುತ್ತಿರುವ ಯುದ್ಧಾಪರಾಧಗಳು ಮತ್ತು ಮಾನವಹಕ್ಕು ಉಲ್ಲಂಘನೆ ಪ್ರಕರಣಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವು ದಯವಿಟ್ಟು ಗಮನಹರಿಸಬೇಕು.-ಅಫ್ಘಾನ್ ವಿದೇಶಾಂಗ ಸಚಿವಾಲಯ