Advertisement

ಗುಂಡು, ರಾಕೆಟ್‌ ದಾಳಿಗಳು ನಡೆಯುತ್ತಿದ್ದವು

01:12 AM Aug 20, 2021 | Team Udayavani |

ಬಂಟ್ವಾಳ: ಅಫ್ಘಾನಿಸ್ಥಾನದಲ್ಲಿ ಕೆಲಸ ಮಾಡಿದ ಅನುಭವಗಳು ರೋಚಕವಾಗಿದ್ದು, ಗುಂಡಿನ ದಾಳಿ, ರಾಕೆಟ್‌ ದಾಳಿಗಳು ನಡೆಯುತ್ತಲೇ ಇದ್ದ ಕಾರಣ ಭಯವಾಗುತ್ತಿತ್ತು. ಆದರೆ ನಾವು ಸೇನಾ ಕ್ಯಾಂಪಿನ ಒಳಗೆ ಇದ್ದ ಕಾರಣ ಸುರಕ್ಷಿತವಾಗಿದ್ದೆವು. ಹೆಚ್ಚು ಆತಂಕ ಪಡುತ್ತಿರಲಿಲ್ಲ.

Advertisement

ಇದು ಅಮೆರಿಕದ ಸೇನಾ ಕ್ಯಾಂಪ್‌ನಲ್ಲಿ ಕರ್ತವ್ಯ ನಿರ್ವಹಿಸಿ 5 ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿರುವ ಬಿ.ಸಿ.ರೋಡಿನ ವೆಂಕಟರಮಣ ಅವರ ಅನುಭವದ ಮಾತುಗಳು. ಅಮೆರಿಕದ ಸೇನಾ ಕ್ಯಾಂಪ್‌ನಲ್ಲಿ ಶೆಫ್‌ ಆಗಿ ಕೆಲಸ ಮಾಡುತ್ತಿದ್ದ ಅವರು ಅಫ್ಘಾನಿಸ್ಥಾನದ ಇಂದಿನ ಪರಿಸ್ಥಿತಿಗೆ ಮೊದಲೇ ಊರಿಗೆ ಬಂದು ಸ್ವಂತ ವ್ಯವಹಾರದಲ್ಲಿ ತೊಡಗಿದ್ದಾರೆ.

ಕೆಲವು ವರ್ಷಗಳ ಹಿಂದೆ ನಮ್ಮ ಜತೆ ಕೆಲಸ ಮಾಡುತ್ತಿದ್ದವರನ್ನು ಕಿಡ್ನಾಪ್‌ ಮಾಡಿ ಕೊಂದಿದ್ದರಿಂದ ನಾವು ಪೂರ್ತಿ ಸುರಕ್ಷಿತವಾಗಿದ್ದೇವೆ ಎನ್ನುವಂತಿರಲಿಲ್ಲ. ಜತೆಗೆ ಹಿಂದೆ ಕೆಲಸ ಮಾಡುತ್ತಿದ್ದ ಕಂಪೆನಿಯ ಕಾರಿನಲ್ಲಿ ಹೋಗುವಾಗ ನಮ್ಮ ಕಣ್ಣೆದುರೇ ಬೇರೆ ಕಾರುಗಳನ್ನು ಸ್ಫೋಟ ಮಾಡಿದ ಸನ್ನಿವೇಶಗಳನ್ನು ಕಂಡಿದ್ದೇವೆ ಎಂದವರು ಹೇಳಿದ್ದಾರೆ.

ಸುಮಾರು 7 ವರ್ಷಅಫ್ಘಾನಿಸ್ಥಾನದಲ್ಲಿದ್ದ ಅವರು ಕಂದಹಾರ್‌, ಕಾಬೂಲ್‌, ಅರಿಯಾಣ, ಜಲಲಾಬಾದ್‌ ಪ್ರದೇಶಗಳಲ್ಲಿ ಕೆಲಸ ಮಾಡಿದ್ದು, ಸೇನಾ ನೆಲೆಯಲ್ಲಿದ್ದ ಕಾರಣ ಅವರಿಗೆ ಹೊರಗೆ ಬರಬೇಕಾದ ಪರಿಸ್ಥಿತಿ ಇರಲಿಲ್ಲ.

ಸದ್ಯ ಇರುವವರು ಸುರಕ್ಷಿತ :

Advertisement

ಸದ್ಯ ಇವರ ಜತೆ ಕೆಲಸ ಮಾಡುತ್ತಿದ್ದ 16 ಮಂದಿ ಭಾರತೀಯರು ಅಲ್ಲಿದ್ದು, ಅವರಲ್ಲಿ ಹೆಚ್ಚಿನವರು ಗೋವಾದವರು. ಓರ್ವ ಪುತ್ತೂರು ಮೂಲದ ವ್ಯಕ್ತಿಯೂ ಇದ್ದು ಸುರಕ್ಷಿತವಾಗಿದ್ದಾರೆ. ಅಮೆರಿಕದ ಸೈನಿಕರು, ಪ್ರಮುಖರು ಜತೆಗಿರುವ ಕಾರಣ ಆತಂಕ ಪಡಬೇಕಿಲ್ಲ. ಅವರನ್ನು ಶೀಘ್ರ ಚಾರ್ಟರ್‌ ವಿಮಾನದ ಮೂಲಕ ಸ್ವದೇಶಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂಬ ಮಾಹಿತಿ ಇದೆ.

ಸೇನಾ ನೆಲೆ ಹಿಂಪಡೆಯುವ ಮಾತು :

ಅಮೆರಿಕದ ಅಧ್ಯಕ್ಷರ ಬದಲಾವಣೆಯ ಸಂದರ್ಭ ಅಮೆರಿಕವು ಅಲ್ಲಿನ ಸೇನಾ ನೆಲೆಯನ್ನು ಹಿಂಪಡೆಯುತ್ತದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದೇವೆ. ನಾವು ಸೇನಾ ಕ್ಯಾಂಪ್‌ನಲ್ಲಿದ್ದ ಕಾರಣ ಸುರಕ್ಷಿತವಾಗಿದ್ದೆವು. ಆದರೆ ಹೊರಗಡೆ ಬಾಂಬ್‌ ಶಬ್ದಗಳು ಕೇಳುತ್ತಲೇ ಇದ್ದವು ಎಂದು ವೆಂಕಟರಮಣ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next