ಹುಬ್ಬಳ್ಳಿ: ಬಳ್ಳಾರಿಯ ಸಂಡೂರಿನ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದ ಸುತ್ತಲಿನ ದೇವದಾರಿ ಪ್ರದೇಶದ ಎರಡರಿಂದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ. ಅದಕ್ಕೆ ಪರ್ಯಾಯವಾಗಿ 808 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಮಾಡಲಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 394ಕೋಟಿ ರೂ. ವೆಚ್ಚದಲ್ಲಿ ಅರಣ್ಯೀಕರಣ ಮಾಡಲು ಗುತ್ತಿಗೆ ಪಡೆದ ಕಂಪನಿ ಮುಂದಾಗಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಂಪನಿ ಹಣ ಪಾವತಿಸಿದೆ. ಗಣಿಗಾರಿಕೆ ವಿರೋಧಿಸುವ ಪರಿಸರವಾದಿಗಳು ಇದನ್ನು ತಿಳಿದುಕೊಳ್ಳಬೇಕು ಎಂದರು.
ಗಣಿಗಾರಿಕೆಗೆ ಉದ್ದೇಶಿಸಿದ ಪ್ರದೇಶದಲ್ಲಿ 90 ಸಾವಿರ ಮರಗಳು ಇವೆ ಎನ್ನುವುದು ಸ್ಪಷ್ಟತೆಯಿಲ್ಲ. ಈ ಗಣಿಗಾರಿಕೆ 40-50 ವರ್ಷ ನಡೆಯುವ ನಿರಂತರ ಪ್ರಕ್ರಿಯೆಯಾಗಿದೆ. ಹಂತ ಹಂತವಾಗಿ ಮರಗಳನ್ನು ಕಡಿಯಲಾಗುವುದು. ರಾಜ್ಯ ಸರ್ಕಾರ 2005ರಲ್ಲಿಯೇ ಈ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದನ್ನು ಈಗ ಕೇಂದ್ರ ಸರ್ಕಾರ ಪುರಸ್ಕರಿಸಿದೆ ಎಂದರು.
ರಾಜ್ಯ ಸರ್ಕಾರ 30-35 ಪ್ರದೇಶಗಳನ್ನು ಗಣಿಗಾರಿಕೆ ನಡೆಸಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದರು.
ಕೇಂದ್ರ ಸರ್ಕಾರ ನನ್ನ ಮೇಲೆ ವಿಶ್ವಾಸವಿಟ್ಟು ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ನೀಡಿದೆ. ಇವುಗಳ ಬಗ್ಗೆ ಸಮಗ್ರ ಮಾಹಿತಿ ತಿಳಿಯಬೇಕಿದೆ. ಇಲಾಖೆಯಲ್ಲಿರುವ ಸಕಾರಾತ್ಮಕ, ನಕಾರಾತ್ಮಕ ಅಂಶಗಳನ್ನು ಕ್ರೋಢೀಕರಿಸಿ, ಅಭಿವೃದ್ಧಿ ಕುರಿತು ಸೂಕ್ತ ಯೋಜನೆ ರೂಪಿಸಲಾಗುವುದು ಎಂದರು.
ರಾಜ್ಯ ಸರ್ಕಾರ ಏಕಾಏಕಿ ತೈಲ ಬೆಲೆ ಏರಿಕೆ ಮಾಡಿದ್ದು, ಸರ್ಕಾರದ ಪರಿಸ್ಥಿತಿ ಹೇಗಿದೆ ಎಂಬುದನ್ನು ಜನತೆ ಅರಿಯಬೇಕಿದೆ. ಜನರಿಂದ ಹಣ ಪಡೆದು, ಜನರಿಗೆ ನೀಡುವುದರಲ್ಲಿ ಯಾವ ಎದೆಗಾರಿಕೆಯಿದೆ? ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಾಗಿ ಸಚಿವ ಎಂ.ಬಿ. ಪಾಟೀಲ ಅವರೇ ಹೇಳಿಕೆ ನೀಡಿದ್ದಾರೆ. ಕೇಂದ್ರಕ್ಕೆ ಬೊಟ್ಟು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕೇಂದ್ರವನ್ನು ಕೇಳಿ ಇವರು ತೈಲ ಬೆಲೆ ಹೆಚ್ಚಿಸಿಲ್ಲ ಎಂದು ಹರಿಹಾಯ್ದರು
ನಟ ದರ್ಶನ್ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವನಾಗಿ ನಾನು ಈ ಕುರಿತು ಮಾತನಾಡುವುದು ಸರಿಯಲ್ಲ. ಆದರೆ, ಕಾನೂನಿನ ಅಡಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಲೇಬೇಕು. ಕಾನೂನಿನ ಎದುರು ಯಾರೂ ದೊಡ್ಡವರಲ್ಲ ಎಂದರು.