Advertisement

ಕೈಗೆಟುಕದ ನಾಯಕ, ಆತ್ಮಸಾಕ್ಷಿಯನ್ನು ತಟ್ಟುವ ದಿ ಲೀಡರ್‌

05:45 PM Dec 05, 2019 | mahesh |

ದಿ ಲೀಡರ್‌ ಒಂದು ಅಸಂಗತ ನಾಟಕ . ರೊಮೇನಿಯಾದ ಲೇಖಕ ಯುಜಿನೊ ಐನೆಸ್ಕೊ ಈ ನಾಟಕದ ಕತೃ. 1953ರಲ್ಲಿ ಬರೆದ ನಾಟಕವಿದು. ದೇಶ , ಕಾಲದ ಹಂಗಿಲ್ಲದೆ ನಿರಂತರವಾಗಿ ಹರಿಯುವ ಸೆಳೆತವೇ ಈ ನಾಟಕದ ಶಕ್ತಿ. ಆಯನ ನಾಟಕದ ಮನೆ ತಂಡದವರು ಪ್ರಸ್ತುತಿ ಪಡಿಸಿದ ನಾಟಕದ ಮೊದಲೆರೆಡು ಪ್ರಯೋಗಗಳು ಮಂಗಳೂರಿನ ಪಾದುವ ಕಾಲೇಜಿನಲ್ಲಿ ಥಿಯೇಟರ್‌ ಹಬ್‌ ಪ್ರೇಕ್ಷಕರಿಗಾಗಿ ನಡೆಯಿತು. ಮೂರನೇ ಪ್ರಯೋಗ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯಿತು.

Advertisement

ನಾಯಕನ ಸುತ್ತ ಗಿರಕಿ ಹೊಡೆಯುವ ನಾಟಕ ತನ್ನ ಅಸಂಗತ ಫಾರ್ಮುಲದ ಮೂಲಕ ವಿಭಿನ್ನವಾಗಿ ನಾಯಕನನ್ನು ಲೇವಡಿ ಮಾಡುತ್ತಾ ಸಾಗುತ್ತದೆ. ರಾಜಕೀಯ ತಂತ್ರಗಾರಿಕೆ, ಗಿಮಿಕ್‌ಗಳು ಮೇಲ್ನೋಟಕ್ಕೆ ಕಾಣುವ ದಿನಚರಿಗಳಷ್ಟೇ ಅಲ್ಲ , ಅವು ರಾಜಕೀಯ ಅಶ್ಲೀÇತೆ ಎಂಬದಾಗಿ ನಾಟಕ ಬಿಂಬಿಸುತ್ತದೆ. ರಾಜಕೀಯದ ಭಾಗವೇ ಆಗಿರುವ ಜನಮಂದೆಯ ದಿನಮಾನದ ಪ್ರೇಮ ಕೂಡ ಕಳ್ಳ ಮನಸ್ಸಿನ ಮೋಸದಾಟವಾಗಿರುತ್ತದೆ ಅನ್ನೋದನ್ನು ನಾಟಕ ಬಯಲು ಮಾಡುತ್ತದೆ.

ಎಲ್ಲಾ ದೇಶ ಕಾಲಕ್ಕೆ ಸೂಕ್ತವಾಗುವ ಈ ನಾಟಕ ಕನ್ನಡ ನೆಲದೊಳಗೆ ಆರಂಭವಾಗುವುದು ಪ್ರೇಮಲೋಕ ಚಿತ್ರದ ಇದು ನನ್ನ ನಿನ್ನ ಪ್ರೇಮ ಗೀತೆಯೊಂದಿಗೆ , ಪ್ರೇಕ್ಷಕರ ನಡುವಿನಿಂದ ಎದ್ದು ಬರುವ ಮುಖವಾಡ ಹೊತ್ತ ಪಾತ್ರಗಳು ತಮ್ಮ ಚಿತ್ರ ವಿಚಿತ್ರ ಮ್ಯಾನರಿಸಮ್‌ಗಳಿಂದ ಗಮನ ಸೆಳೆಯುತ್ತವೆ, ಮುಂದಕ್ಕೆ ವೇದಿಕೆಯೇರುವ ಈ ಪಾತ್ರಗಳು ನಾಟಕದ ಗುಂಪಾಗಿ ಕಾಣಿಸಿಕೊಳ್ಳುತ್ತವೆ.

ನಾಯಕನ ಹುಡುಕಾಟದಲ್ಲಿರುವ ಜನಮಂದೆ ಹಾಗೂ ಮರಿ ನಾಯಕರು ದೂರದವರಲ್ಲ , ಹೊರಗಿನವರೂ ಅಲ್ಲ , ಅದು ನಾವು ಮತ್ತು ನೀವೇ ಅನ್ನೋದನ್ನು ಸಂಕೇತಿಸುತ್ತವೆ ಪ್ರೇಕ್ಷಕರ ನಡುವಿನಿಂದ ಎದ್ದು ಬರುವ ಈ ಪಾತ್ರಗಳು. ಜೊತೆಗೇನೆ ನಾಟಕದ ಗುಂಪು ಮುಖವಾಡವನ್ನು ಬದಲಿಸುವುದು , ಕಳಚುವುದು ಕೂಡ ಮುಖವಾಡ ಹೊತ್ತ ನಮ್ಮ ನಿಮ್ಮನ್ನು ಲೇವಡಿ ಮಾಡಿದಂತೆ ಭಾಸವಾಗುತ್ತದೆ.

ನಾಯಕನ ಬರುವಿಕೆಗಾಗಿನ ಕಾಯುವಿಕೆ ಎಂದಿಗೂ ನಿರರ್ಥಕವಾಗದು ಎಂಬ ರೀತಿಯ ಪೋಸು ಕೊಡುವ ನಾಯಕನ ಹಿಂಬಾಲಕರು , ಜನ ಸಾಮಾನ್ಯರ ಬೇಕು , ಬೇಡ , ಆಶೆ ಆಕಾಂಕ್ಷೆಗಳಿಗೆಲ್ಲಾ ತಾವೇ ವಾರಸುದಾರರು ಅನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ನಾಯಕನ ಫಾಲೋವರ್‌ಗಳು ಜನಸಾಮಾನ್ಯರ ಧ್ವನಿಯಾಗಿ ಕೂಡ ತಾವೇ ಮಾತನಾಡುತ್ತಾರೆ, ಜನಸಾಮಾನ್ಯರ ಮಾತಿನ ವೇದಿಕೆಯನ್ನು ಕೂಡ ಕಿತ್ತೆಗೆದುಕೊಂಡಿರುತ್ತಾರೆ. ಇಷ್ಟರ ನಡುವೆ ರಾಜಕೀಯ ಪ್ರಜ್ಞೆ ಇಲ್ಲದ , ನೈತಿಕ ಶಕ್ತಿ ಇಲ್ಲದ ಹಂತಕ್ಕೆ ಸಾಮಾಜ ತಲುಪಿರುತ್ತದೆ. ಎಲ್ಲವನ್ನು ಸಾಂಕೇತಿಕವಾಗಿ ನಾಟಕ ಮುಂದಿಡುತ್ತದೆ. ಮುಂದೆ ಬರುವಾತ ನಾಯಕನಲ್ಲ , ಸರ್ವಾಧಿಕಾರಿ ಎಂಬ ಕಲ್ಪನೆ ಕೂಡ ಜನಮಂದೆಯಿಂದ ಕಣ್ಮರೆಯಾಗುತ್ತದೆ.

Advertisement

ಮದ್ದು ಗುಂಡುಗಳನ್ನು ಸಂಗ್ರಹಿಸುವ ನಾಯಕ , ರೇಡಿಯೋ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡುವ ನಾಯಕ , ತನ್ನ ಬೆನ್ನನ್ನೆ ತಾನೇ ತಟ್ಟಿಕೊಳ್ಳುವ ನಾಯಕ, ಮಾತು ಮಾತಿಗೆ ಬಾಡಿಗೆ ಚಪ್ಪಾಳೆಯನ್ನು ಬಯಸುವ ನಾಯಕ, ಕುಸಿದು ಬಿದ್ದರೂ ಸವಾರಿಸಿಕೊಳ್ಳುವ ನಾಯಕ , ಹೆಗ್ಗಣವನ್ನು ಮುದ್ದು ಮಾಡುವ ನಾಯಕ ಇತಿಹಾಸದೂದ್ದಕ್ಕೂ ಕಾಣಿಸಿಕೊಂಡವನೇ , ಆತನೆ ವರ್ತಮಾನದ ಕಾಲದಲ್ಲೂ ಕಾಣಿಸುತ್ತಿದ್ದಾನೆ , ಮತ್ತು ಜನ ಕೂಡ ಅಂತವನನ್ನೆ ಅಪ್ರಜ್ಞಾಪೂರ್ವಕವಾಗಿ ಬಯಸುತ್ತಿದ್ದಾರೆ ಅನ್ನೋದನ್ನು ನಾಟಕ ತೀವ್ರವಾಗಿ ಧ್ವನಿಸುತ್ತದೆ.

ಅದೋ ಬೀದಿಯ ಕೊನೆಯಲ್ಲಿ ಲೀಡರ್‌ ಎಂಬ ನಾಟಕದ ಮೊದಲ ಮಾತು , ನಾಯಕ ಜನರೊಂದಿಗಿಲ್ಲ , ಜನರ ಕೈಗೆಟಕುವುದೂ ಇಲ್ಲ ಎಂಬುದನ್ನು ಸೂಚ್ಯವಾಗಿ ಧ್ವನಿಸಿದೆ. ಕಳಚಿದ ಪ್ಯಾಂಟ್‌ , ಕಳಚುವ ಪ್ಯಾಂಟ್‌ ಕೂಡ ರಾಜಕೀಯ ಅಶ್ಲೀಲತೆಯನ್ನೇ ಸಂಕೇತಿಸುವ ಜೊತೆಗೆ ಎಲ್ಲವನ್ನೂ ಬಿಟ್ಟವರ ರೂಪಕವಾಗಿ ಕಾಣುತ್ತದೆ.

ಪೊಲೀಸ್‌ ದೌರ್ಜನ್ಯವನ್ನು ಗಂಭೀರವಾಗಿಯೇ ತೋರಿಸುವ ನಾಟಕ , ಜನಮಂದೆ ಸ್ವಪ್ರಜ್ಞೆ ಕಳೆದುಕೊಂಡಿರುವುದನ್ನು ಕೂಡ ಪರಿಣಾಮಕಾರಿಯಾಗಿ ತೋರಿಸಿದೆ. ಎಲ್ಲ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಿರುವ ಬೋಳೆ ಸಾಮಾಜವು ಲಾಂಗ್‌ ಲೀವ್‌ ದಿ ಲೀಡರ್‌ ಎಂಬ ಘೋಷಣೆಯಲ್ಲೇ ಮುಳುಗಿರುವುದನ್ನು ಎತ್ತಿ ತೋರಿಸುತ್ತದೆ.

ಕೊನೆಗೂ ಹೆಗ್ಗಣವನ್ನು ಮುದ್ದಾಡುವ ಲೀಡರ್‌ ಸರ್ವಶ್ರೇಷ್ಠನಾಗಿ ಕಾಣಿಸುತ್ತಾನೆ. ಎಲ್ಲ ಜೈಕಾರವೂ ಆತನಿಗೆ ಮೀಸಲು . ಜನ ಸಮೂಹದ ನಡುವೆ ಸಾಗಿದ ಲೀಡರ್‌ನ ತಲೆ ಕಾಣಿಸಲಿಲ್ಲ. ಅಷ್ಟಕ್ಕೆ ಲೀಡರ್‌ಗೆ ತಲೆ ಇಲ್ಲ ಎಂಬ ಸಹಜ ಪ್ರಶ್ನೆಗೆ ಅಷ್ಟೇ ಸಹಜವಾಗಿ ಲೀಡರ್‌ಗೆ ತಲೆ ಏಕೆ ಬೇಕು ಎಂಬ ಸಮಾಜಾಯಿಸಿಕೆ ಲೀಡರ್‌ ನಾಟಕ ದೇಶ ಕಾಲವನ್ನು ಮೀರಿದ ನಾಟಕ ಎಂಬುದಕ್ಕೆ ಸಾಕ್ಷಿಯಾಗಿತ್ತು.

ಪರಿಚಯವೇ ಇಲ್ಲದವರು ಭೇಟಿಯಾದಾಗ , ಅದೇ ಪರಸ್ಪರ ಪರಿಚಯ ಇಲ್ಲವೆಂಬುದುದೇ ನಮ್ಮೊಳಗಿನ ಸಮಾನ ಮನಸ್ಕತೆ ಎಂದು ಹೇಳುವ ಸೋಗಲಾಡಿತನ ಇಲ್ಲಿ ಕೇವಲ ಡೈಲಾಗ್‌ ಮಾತ್ರವಾಗಿರದೆ ಮಾನವ ಸಂಬಂಧಗಳ ಕುಸಿತದ ಬಗ್ಗೆ ಬೊಟ್ಟು ಮಾಡುವ ನಾಟಕದೊಳಗಿನ ಧ್ವನಿಯಾಗಿದೆ.

ನಾವು ಕಟ್ಟಿಕೊಳ್ಳುವ , ಕಲ್ಪಿಸಿಕೊಳ್ಳುವ ಮುಖವಾಡ ನಮ್ಮ ನಮ್ಮೊಳಗೆ ಅದೆಂತ ಅಪರಿಚಿತತೆಯನ್ನು ಬೆಳೆಸಿರುತ್ತದೆ ಅಂದರೆ ನಮ್ಮ ಜೊತೆಗಾರರನ್ನೋ , ಪಕ್ಕದವರನ್ನೋ ಅನಿವಾರ್ಯವಾಗಿ ನಿನ್ನ ಹೆಸರೇನು ಎಂದು ಕೇಳಬೇಕಾಗುತ್ತದೆ. ನಿನ್ನ ಹೆಸರೇನು , ನಿನ್ನ ಹೆಸರೇನು ಎಂಬ ನಾಟಕದ ಕೊನೆಯ ಮಾತು , ನಾನು ಯಾರು ಎಂಬುದನ್ನು ಕೂಡ ಮೈ ತಡವಿ ನೋಡಿಕೊಳ್ಳುವಂತೆ ಮಾಡುತ್ತದೆ.

ಇಡೀ ನಾಟಕವನ್ನು ನಿರ್ದೇಶಕ ಕೆ.ಪಿ. ಲಕ್ಷ್ಮಣ್‌ ಅಧುºತವಾಗಿ ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ. ಅಸಂಗತ ನಾಟಕವಾಗಿದ್ದರಿಂದ ನಿರ್ದೇಶಕನಿಗೆ ಬಾರೀ ಸವಾಲೊಡ್ಡುವ ನಾಟಕ ಇದು. ನಟರನ್ನು ಚೆನ್ನಾಗಿ ದುಡಿಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೂ ಒಂದಷ್ಟು ಜಿಜ್ಞಾಸೆಯನ್ನು ಮೂಡಿಸುವ ನಾಟಕವಿದು.

ಪ್ರಧಾನ ಭೂಮಿಕೆಯ ಪಾತ್ರಧಾರಿ ಶ್ಯಾಮ್‌ ಸುಂದರ್‌ ಮೂರನೇ ಪ್ರಯೋಗದಲ್ಲಿ ಸ್ವಲ್ಪ ಸೊರಗಿದ್ದು ಕಾಣುತ್ತಿತ್ತು. ಜೊತೆಗಾರ ಪಾತ್ರಧಾರಿಯ ಗೈರು ಹಾಜರಿ ಕೂಡ ಇದಕ್ಕೆ ಕಾರಣವಾಗಿರಬಹುದು. ಇನ್ನೂ ಗಮನಾರ್ಹವೆಂದರೆ ಹಳೆ ತಲೆಮಾರಿನ ಪ್ರೇಕ್ಷಕರು ಮತ್ತು ಹೊಸ ತಲೆಮಾರಿನ ಪ್ರೇಕ್ಷಕರ ನಡುವೆ ನಾಟಕ ಪ್ರದರ್ಶನಗೊಂಡಾಗ ,ನಾಟಕದ ಮಧ್ಯೆ ಕಡ್ಲೆ ಮಾರುವಾತನ ಮೂಲಕ ಪ್ರೇಕ್ಷಕರಿಗೆ ಕಡಲೆ ಕಟ್ಟಿನ ಪೇಪರ್‌ನಲ್ಲಿ ಬರೆದು ನೀಡಿದ ಸಂದೇಶ ಹೊಸ ತಲೆಮಾರಿನ ಪ್ರೇಕ್ಷಕರ ಅರಿವಿಗೆ ಬರಲೇ ಇಲ್ಲ. ಧ್ವನಿ ಅಡಗಿದ ಸಮಾಜ ಯಾವ ಸಂದೇಶವನ್ನು ನಿರೀಕ್ಷಿಸುವುದಿಲ್ಲ ಅನ್ನುವ ಅರ್ಥವೇ ಇದು?

ತಾರಾನಾಥ್‌ ಗಟ್ಟಿ ಕಾಪಿಕಾಡ್‌

Advertisement

Udayavani is now on Telegram. Click here to join our channel and stay updated with the latest news.

Next